ಪಾಠ ಕೇಳೋಣ ಅಂದ್ರೆ ನೆಟ್ವರ್ಕ್ ಇಲ್ಲ; ಯಾರಿಗೆ ಹೇಳೋಣ?

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕೊರೊನಾ ಮಹಾಮಾರಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿ ಜನರ ಬದುಕನ್ನು ತಲ್ಲಣಿಸುತ್ತಿದೆ. ಶಿಕ್ಷಣ ವ್ಯವಸ್ಥೆ ಇನ್ನೂ ದಾರಿಗೆ ಬರುತ್ತಿಲ್ಲ. ಸರ್ಕಾರ ಕಳೆದ ವರ್ಷದಿಂದಲೂ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿದೆ. ಆದರೆ, ನೆಟ್‌ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.

ನೆಟ್‌ವರ್ಕ್ ಸಮಸ್ಯೆಯಿಂದಾಗಿ ಆನ್‌ಲೈನ್ ಶಿಕ್ಷಣದಿಂದ ಹಳ್ಳಿಯ ವಿದ್ಯಾರ್ಥಿಗಳು ವಂಚಿತವಾಗುವಂತೆ ಆಗಿದೆ. ವಿದ್ಯಾರ್ಥಿಗಳು ಮಹಡಿ ಏರಿ ಕುಳಿತರು, ಗುಡ್ಡ ಹತ್ತಿದರು, ರಸ್ತೆಗೆ ಬಂದು ನಿಂತರು, ಮರ ಏರಿದರು,. ಆದರೂ ನೆಟ್‌ವರ್ಕ್ ಮಾತ್ರ ಅವರಿಗೆ ಸಿಗುತ್ತಿಲ್ಲ!

ಹಲವು ವಿದ್ಯಾರ್ಥಿಗಳು ಮನೆ ಮಹಡಿಯ ಮೇಲೆ ಮೊಬೈಲ್ ಹಿಡಿದು ನೆಟ್‌ವರ್ಕ್‌ಗಾಗಿ ಹುಡುಕಾಡುತ್ತಿದ್ದಾರೆ. ಬಿಸಿಲು, ಚಳಿ, ಮಳೆ ಗಾಳಿ ಎನ್ನದೆ ಆನ್‌ಲೈನ್ ಶಿಕ್ಷಣಕ್ಕಾಗಿ ಪರದಾಟ ನಡೆಸಿದ್ದಾರೆ.

ಸದ್ಯ ಕೊರೊನಾ ಎರಡನೇ ಅಲೆ ತಹಬದಿಗೆ ಬರುತ್ತಿದೆ. ಇದರ ಮಧ್ಯೆ ಮೂರನೇ ಅಲೆಯ ಭಯ ಜನರನ್ನು ಕಾಡುತ್ತಿದೆ. ಅದರಲ್ಲಿಯೂ ಈ ಅಲೆ ಮಕ್ಕಳಲ್ಲಿ ಹೆಚ್ಚಾಗಿ ವಕ್ಕರಿಸುತ್ತದೆ ಎಂಬ ಆತಂಕ ಎಲ್ಲೆಡೆ ಮನೆ ಮಾಡಿದೆ. ಹೀಗಾಗಿ ಸರ್ಕಾರ ಶಾಲಾ – ಕಾಲೇಜುಗಳನ್ನು ತೆರೆಯುವ ಗೋಜಿಗೆ ಹೋಗದೆ, ಆನ್‌ಲೈನ್ ಮೂಲಕ ಮಕ್ಕಳಿಗೆ ಶಿಕ್ಷಣ ಒದಗಿಸಲು ಹೆಚ್ಚು ಆಸಕ್ತಿ ವಹಿಸಲಾಗುತ್ತಿದೆ.

ಆನ್‌ಲೈನ್ ಶಿಕ್ಷಣಕ್ಕೆ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆ ಅತೀ ಅವಶ್ಯ. ಆದರೆ, ಗ್ರಾಮೀಣ ಭಾಗಗಳಲ್ಲಿ ಮತ್ತೊಬ್ಬರ ಜೊತೆಗೆ ಫೋನ್‌ನಲ್ಲಿ ಮಾತನಾಡಬೇಕೆಂದರೂ ಸರಿಯಾದ ನೆಟ್‌ವರ್ಕ್ ಸಿಗುತ್ತಿಲ್ಲ. ಈ ಸಂದರ್ಭದಲ್ಲಿಯೇ ಆನ್‌ಲೈನ್‌ನಲ್ಲಿಯೇ ತಾಸಿಗೂ ಹೆಚ್ಚು ಕಾಲ ಪಾಠ ಆಲಿಸುವುದು ಸವಾಲಿನ ಕೆಲಸವಾಗಿದೆ. ಅದರಲ್ಲಿಯೂ ಗದಗ ತಾಲೂಕಿನ ಕಬಲಾಯತಕಟ್ಟಿ ಹಾಗೂ ಸುತ್ತಲಿನ ಹಲವು ಗ್ರಾಮಗಳಲ್ಲಿನ ವಿದ್ಯಾರ್ಥಿಗಳ ಪಾಡು ಚಿಂತಾಜನಕವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ನೆಟ್‌ವರ್ಕ್ ಸಲುವಾಗಿ ಹೊಲ, ಗದ್ದೆ, ಮನೆ ಮಹಡಿ ಸುತ್ತಾಡುವುದು ಸಾಮಾನ್ಯವಾಗಿ ಬಿಟ್ಟಿದೆ.

ಕಬಲಾಯತಕಟ್ಟಿ ಗ್ರಾಮ ಗದಗ ನಗರದಿಂದ ಕೇವಲ 14 ಕಿ.ಮೀ. ದೂರದಲ್ಲಿದೆ. ಆದರೂ ಇಲ್ಲಿನ ವಿದ್ಯಾರ್ಥಿಗಳು ನೆಟ್‌ವರ್ಕ್‌ಗಾಗಿ ಪರಿತಪಿಸುವಂತಾಗಿದೆ. ಈ ಗ್ರಾಮದಲ್ಲಿನ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಸದ್ಯ ಆನ್‌ಲೈನ್ ಶಿಕ್ಷಣದ ಮೂಲಕ ಪಾಠ ಕೇಳಲು ಹರಸಾಹಸ ಪಡುತ್ತಿದ್ದಾರೆ. ಜತೆಗೆ, ಆಗಾಗ ಕೈಕೊಡುವ ವಿದ್ಯುತ್ ಮೊಬೈಲ್‌ಗಳಲ್ಲಿ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗುವಂತೆ ಮಾಡುತ್ತಿದೆ.

ನಗರಕ್ಕೆ ಪಕ್ಕ ವಾಸ್ತವ್ಯ

ಹೀಗಾಗಿ ಹಲವು ಕುಟುಂಬಗಳು ತಮ್ಮ ವೃದ್ಧ ತಂದೆ, ತಾಯಿಗಳನ್ನು ಬಿಟ್ಟು ಪಕ್ಕದ ನಗರಗಳಲ್ಲಿ ವಾಸ ಮಾಡುವ‌ ಅನಿವಾರ್ಯತೆಗೆ ಬಂದು ಸಿಲುಕಿವೆ. ಇತ್ತ ತುರ್ತಾಗಿ ಯಾವುದೇ ಕಚೇರಿ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಸಂಪರ್ಕಿಸಬೇಕೆಂದರೂ ನೆಟ್‌ವರ್ಕ್ ಇಲ್ಲದಾಗಿದೆ. ಈ‌ ಸಮಸ್ಯೆ ಕುರಿತು ಶಾಸಕರಿಗೆ ಹಾಗೂ ಸಂಬಂಧಪಟ್ಟವರಿಗೂ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೆ, ಯಾರೊಬ್ಬರೂ ಈ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಪರೀಕ್ಷೆ ಸಮಯದಲ್ಲಿ ತೊಂದರೆ

ಹಾವೇರಿಯಲ್ಲಿ ಬಿ.ಟೆಕ್. ಓದುತ್ತಿದ್ದೇನೆ. ಸದ್ಯ ಕೊರೊನಾದಿಂದಾಗಿ ಊರಲ್ಲಿಯೇ ಇದ್ದೇನೆ. ಆನ್‌ಲೈನ್‌ನಲ್ಲಿಯೇ ಓದಬೇಕು. ಆದರೆ, ಊರಲ್ಲಿ ನೆಟ್‌ವರ್ಕ್ ಬಾರದ ಕಾರಣ ಹೊಲಕ್ಕೆ, ಮನೆಯ ಮಾಳಿಗೆಯ ಮೇಲೆ ಓಡಬೇಕಾಗಿದೆ. ಪರೀಕ್ಷೆಯ ಸಮಯದಲ್ಲಿ ತುಂಬಾ ತೊಂದರೆಯಾಗುತ್ತಿದೆ.

ವಿಶ್ವನಾಥ್ ದೊಡ್ಡಮನಿ, ಬಿ.ಟೆಕ್. ವಿದ್ಯಾರ್ಥಿ

ಎಲ್ಲಿದೆ ಡಿಜಿಟಲ್ ಇಂಡಿಯಾ?
ಸರ್ಕಾರ ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದೆ. ಆದರೆ, ನಮ್ಮಲ್ಲಿ ಅದು ಕಾಣಿಸುತ್ತಿಲ್ಲ. ನಾನು ಬಿಎಸ್ಸಿ ಅಗ್ರಿ ಓದುತ್ತಿದ್ದೇನೆ. ನೆಟ್‌ವರ್ಕ್ ಇಲ್ಲದ ಕಾರಣ ತುಂಬಾ ತೊಂದರೆಯಾಗುತ್ತಿದೆ. ಹೊಲಕ್ಕೆ ಹೋಗಿ ಓದಬೇಕಾದ ಪರಿಸ್ಥಿತಿ ಇದೆ. ಆದರೆ, ಮಳೆಯ ಕಾಟ ಇರುವುದರಿಂದ ತುಂಬಾನೆ ತೊಂದರೆಯಾಗುತ್ತಿದೆ.

ವಿಜಯಲಕ್ಷ್ಮೀ ದೊಡ್ಡಮನಿ, ವಿದ್ಯಾರ್ಥಿನಿ

ಪರದಾಡುತ್ತಲೇ ಇದ್ದೇವೆ

ಆನ್‌ಲೈನ್ ತರಗತಿಗಳು ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ನಡೆಯುತ್ತಿವೆ. ಆದರೆ, ಅಲ್ಲಿಂದ ಇಲ್ಲಿಯವರೆಗೂ ನಾವು ತುಂಬಾ ಪರದಾಡುತ್ತಿದ್ದೇವೆ. ನೆಟ್‌ವರ್ಕ್ ಸಮಸ್ಯೆ ನಮಗೆ ಕ್ಲಾಸ್ ಕೇಳಲು ತುಂಬಾನೆ ತೊಂದರೆ ಮಾಡುತ್ತಿದೆ. ನಮಗೆ ದಿಕ್ಕು ತೋಚದಂತಾಗಿದೆ.

– ಸುಮಿತಾ ದೊಡ್ಡಮನಿ, ವಿದ್ಯಾರ್ಥಿನಿ

ಮನವಿ ಮಾಡಿದರೂ ಸ್ಪಂದಿಸಿಲ್ಲ

ನಮ್ಮ ಮಕ್ಕಳು ಹಾಗೂ ಗ್ರಾಮದ ಆಸುಪಾಸಿನ ವಿದ್ಯಾರ್ಥಿಗಳು ನೆಟ್‌ವರ್ಕ್ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೊರೊನಾದಿಂದಾಗಿ ಎರಡು ವರ್ಷಗಳಿಂದ ಈ ಭಾಗದ ವಿದ್ಯಾರ್ಥಿಗಳು ಮನೆಯಲ್ಲಿಯೇ ಆನ್‌ಲೈನ್‌ನಲ್ಲಿ ಓದುತ್ತಿದ್ದಾರೆ. ಆದರೆ, ನೆಟ್‌ವರ್ಕ್ ಇಲ್ಲದಿರುವುದರಿಂದಾಗಿ ಅವರು ಹೊಲ, ಮಹಡಿ, ರಸ್ತೆಯ ಮೇಲೆ ಕುಳಿತು ಓದುತ್ತಿದ್ದಾರೆ. ಇಲ್ಲಿಯೂ ನೆಟ್‌ವರ್ಕ್ ಸಮಸ್ಯೆ ಸರಿಯಿದೆ ಅಂತಲ್ಲ. ಕೂಡಲೇ ಸಂಬಂಧಪಟ್ಟವರು ವಿದ್ಯಾರ್ಥಿಗಳ ತೊಂದರೆ ಬಗೆಹರಿಸಬೇಕಿದೆ.

ಮುನೇಂದ್ರಪ್ಪ ದೊಡ್ಡಮನಿ, ಕಬಲಾಯತಕಟ್ಟಿ ತಾಂಡಾ.


Spread the love

LEAVE A REPLY

Please enter your comment!
Please enter your name here