ವಿಜಯಸಾಕ್ಷಿ ಸುದ್ದಿ, ಮುಂಬಯಿ
ಮಹಾಮಾರಿಯಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರದ ವಿರುದ್ಧ ಶಿವಸೇನೆ ತೀವ್ರ ಟೀಕೆ ಮಾಡಿದೆ.
ದೇಶದಲ್ಲಿ ಕೊರೊನಾ ನಿಭಾಯಿಸುವುದರಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಣ್ಣ ಸಣ್ಣ ರಾಷ್ಟ್ರಗಳು ಕೂಡ ಸಹಾಯ ಹಸ್ತ ಚಾಚಲು ಮುಂದೆ ಬರುತ್ತಿವೆ. ಆದರೆ, ಮೋದಿ ಸರ್ಕಾರವು ಬಹುಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಿಸಲು ಮುಂದಾದ ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಗೊಳಿಸುವುದಕ್ಕೂ ಸಿದ್ಧವಿಲ್ಲ ಎಂದು ಟೀಕಿಸಿದೆ.
ಇಂದು ನಾವು ಕೊರೊನಾ ವಿರುದ್ದ ಹೋರಾಡುವ ಶಕ್ತಿ ಗಳಿಸಿಕೊಂಡಿದ್ದರೆ, ಅದಕ್ಕೆ ಈ ಹಿಂದಿನ 70 ವರ್ಷಗಳಲ್ಲಿ ಪಂಡಿತ್ ನೆಹರು, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಸೃಷ್ಟಿಸಲಾದ ವ್ಯವಸ್ಥೆಯೇ ಕಾರಣ. ಈ ವ್ಯವಸ್ಥೆ ಭಾರತ ಸಂಕಷ್ಟದ ಕಾಲವನ್ನು ನಿಭಾಯಿಸುವುದಕ್ಕೆ ಸಾಧ್ಯವಾಗಿದೆ ಎಂದು ಹೊಗಳಿದ್ದಾರೆ.
ಇಡೀ ವಿಶ್ವವೇ ಭಾರತದ ಸೋಂಕಿನಿಂದ ವಿಶ್ವಕ್ಕೆ ಅಪಾಯವಿದೆ ಎಂದು ಹೇಳುತ್ತಿದೆ. ವಿಶ್ವ ಸಂಸ್ಥೆ ಕೂಡ ಸಹಾಯ ಮಾಡಬೇಕೆಂದು ಕರೆ ನೀಡಿದೆ. ಬಾಂಗ್ಲಾದೇಶ 10 ಸಾವಿರ ರೆಮಿಡಿಸಿವರ್ ಔಷಧ ಕಳುಹಿಸಿದೆ. ಭೂತಾನ್ ವೈದ್ಯಕೀಯ ಆಕ್ಸಿಜನ್ ಕಳಿಸಿದೆ. ನೇಪಾಳ, ಮ್ಯಾನ್ಮಾರ್ ಹಾಗೂ ಶ್ರೀಲಂಕಾಗಳಂತಹ ಚಿಕ್ಕ ರಾಷ್ಟ್ರಗಳೂ ದೇಶಕ್ಕೆ ಸಹಾಯ ಮಾಡತ್ತಿವೆ.
ಬೇರೆ ರಾಷ್ಟ್ರಗಳ ಸಹಾಯಕ್ಕೆ ಕೈ ಚಾಚುತ್ತಿದ್ದ ಪಾಕಿಸ್ತಾನ, ಕಾಂಗೋ, ರುವಾಂಡಾಗಳಂತಹ ರಾಷ್ಟ್ರಗಳು ಕೂಡ ಇಂದು ಭಾರತಕ್ಕೆ ಸಹಾಯ ಮಾಡುತ್ತೇವೆ ಎಂಬ ಮಾತುಗಳನ್ನು ಹೇಳುತ್ತಿವೆ. ಇದು ಆಳುವವರ ತಪ್ಪಾದ ನೀತಿಗಳ ಪರಿಣಾಮ ಎಂದು ಶಿವಸೇನೆ ಮೋದಿ ಸರ್ಕಾರದ ವಿರುದ್ಧ ಗುಡುಗಿದೆ.