ವಿಜಯಸಾಕ್ಷಿ ಸುದ್ದಿ, ದಾವಣಗೆರೆ
ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿ. ಯೋಗೇಶ್ವರ್ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಈಗಾಗಲೇ 65 ಜನ ಶಾಸಕರು ಸಹಿ ಮಾಡಿ ಪತ್ರ ನೀಡಿದ್ದಾರೆ. ಹೀಗಾಗಿ ಸಿ.ಪಿ. ಯೋಗೇಶ್ವರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಸಿಪಿವೈಗೆ ಜಲ ಸಂಪನ್ಮೂಲ ಹಾಗೂ ಇಂಧನ ಖಾತೆಯೊಂದಿಗೆ ರಾಮನಗರ ಜಿಲ್ಲೆಯ ಉಸ್ತುವಾರಿ ಬೇಕಾಗಿತ್ತು. ಆದರೆ, ಅದು ಸಿಕ್ಕಿಲ್ಲ. ಈ ಕಾರಣಕ್ಕೆ ಅವರಿಗೆ ತಳಮಳ ಶುರುವಾಗಿದೆ. ಹೀಗಾಗಿಯೇ ಇಂತಹ ಕೆಲಸ ಮಾಡುತ್ತಿದ್ದಾರೆ. ದೆಹಲಿ ನಾಯಕರ ಮನೆಯ ಗೇಟ್ ಮುಟ್ಟಿ, ಅಲ್ಲಿ ಪೋಟೋ ತೆಗೆಸಿಕೊಂಡು ಸಿಎಂ ಬದಲಾವಣೆ ಕುರಿತು ಸುಳ್ಳು ಹೇಳುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖವಾಗಲಿ, ಆಗ ನನ್ನ ಹೋರಾಟ ಶುರುವಾಗಲಿದೆ. ಯೋಗೇಶ್ವರ್ ಅವರನ್ನು ವಜಾ ಮಾಡಬೇಕು. ಜೊತೆಗೆ ಮೆಗಾಸಿಟಿ ಹಗರಣದ ಹಿನ್ನೆಲೆಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಯೋಗೇಶ್ವರ್ ನ ಮೇಲೆ ಕ್ರಮ ಕೈಗೊಳ್ಳಲು ಸಿಎಂಗೆ ಹೆದರಿಕೆ ಇಲ್ಲ. ಸಿಎಂ ಅವರ ರೆಡಿಮೇಡ್ ಫುಡ್ ಅಲ್ಲ. ಅವರು ಪಕ್ಷ ಸಂಘಟನೆ ಹಾಗೂ ಸಾಕಷ್ಟು ಹೋರಾಟದ ಮೂಲಕ ಮೇಲೆ ಬಂದವರು. ಯಡಿಯೂರಪ್ಪ ಆಲದ ಮರ ಇದ್ದಂತೆ. ನಾವು ಅವರ ನೆರಳಲ್ಲಿ ಇದ್ದೇವೆ. ಅವರ ಬೆನ್ನಿಗೆ ಚೂರಿ ಹಾಕಿದರೆ ನಾವು ಬಿಡಲ್ಲ. ಸದ್ಯ ಕೋವಿಡ್ ಇರುವುದರಿಂದ ನಾವು ಸುಮ್ಮನಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.