ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಬಸನಗೌಡ ಯತ್ನಾಳ ಅವರದ್ದು ಫೂಲೀಶ್ ಹೇಳಿಕೆ. ಅದು ಅಶಿಸ್ತಿನ ಹೇಳಿಕೆ. ಯತ್ನಾಳ ಹೇಳಿಕೆಯನ್ನು ಖಂಡಸ್ತಿನಿ ಎಂದು ಆರ್ಡಿಪಿಆರ್ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.
ಕೊಪ್ಪಳದ ಶಿವಶಾಂತ ಮಂಗಲಭವನದಲ್ಲಿ ಬುಧವಾರ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಪ್ರಚಾರದ ಹಿನ್ನೆಲೆಯಲ್ಲಿ ಮಂಡಲ ಪ್ರಭಾರಿಗಳು ಹಾಗೂ ಮುಖಂಡರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷದಲ್ಲಿ ಇದ್ದುಕೊಂಡು ಶಿಸ್ತಿಗೆ ಭಂಗ ತರುವ ಕೆಲಸ ಸರಿಯಲ್ಲ. ಯತ್ನಾಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಈಗಾಗಲೇ ರಾಜ್ಯಾಧ್ಯಕ್ಷರು ಆದೇಶಿಸಿದ್ದಾರೆ. ನಾವು ಅಂದರೆ ಬಿಜೆಪಿಯವರು ಶಿಸ್ತಿನ ಸಿಪಾಯಿಗಳಾಗಿರಬೇಕು ಎಂದರು.
ಎರಡು ಅಸೆಂಬ್ಲಿ, ನಾಲ್ಕು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಮುಂದಿನ ದಿಕ್ಸೂಚಿ ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ಹೇಳಿಕೆಯನ್ನು ಸವಾಲಾಗಿ ಬಿಜೆಪಿ ಸ್ವೀಕರಿಸುತ್ತದೆ. ಫಲಿತಾಂಶ ಕಾದು ನೋಡಿ ದಿಕ್ಸೂಚಿ ಯಾವ ಕಡೆ ಇದೆ ಅಂತ ಗೊತ್ತಾಗುತ್ತೆ ಎಂದು ಹೇಳಿದರು.
ನಮಗೆ ನೂರಕ್ಕೆ ನೂರು ವಿಶ್ವಾಸ ಇದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆದ್ದೇ ಗೆಲ್ಲುತ್ತಾರೆ. ಎರಡನೇ ಬಾರಿ ಮತದಾರರನ್ನ ಭೇಟಿ ಮಾಡಿದ್ದೇನೆ. ಕಾಂಗ್ರೆಸ್ನ ಯಾರಾದರೂ ಒಮ್ಮೆಯಾದರೂ, ಒಬ್ಬರನ್ನಾದರೂ ಭೇಟಿ ಮಾಡಿದಾರಾ? ಎಂದು ಪ್ರಶ್ನಿಸಿದರು.