ವಿಜಯಸಾಕ್ಷಿ ಸುದ್ದಿ, ನವದೆಹಲಿ
ಕೊರೊನಾದಿಂದಾಗಿ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಯುಎಇನಲ್ಲಿ ನಡೆಸಲು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳನ್ನು ಯುಎಇಗೆ ಸ್ಥಳಾಂತರ ಮಾಡಬೇಕೆಂದು ಇಂದು ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ. ಭಾರತದಲ್ಲಿ ನಡೆಯಬೇಕಿದ್ದ ಈ ಪಂದ್ಯಾವಳಿಯನ್ನು ಯುಎಇಗೆ ಶಿಫ್ಟ್ ಮಾಡಲಾಗಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಗ್ಗೆ ಒಪ್ಪಿಗೆ ನೀಡಿದ್ದು, ಇಂದು ಮಂಡಳಿಯು ಈ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಮಾಹಿತಿ ನೀಡಲಿದೆ. ಯುಎಇಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದರೂ, ಹೋಸ್ಟಿಂಗ್ ಹಕ್ಕುಗಳು ಬಿಸಿಸಿಐನೊಂದಿಗೆ ಉಳಿಯುತ್ತವೆ. ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದು ತಿಳಿದು ಬಂದಿದೆ.
ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಭಾರತೀಯ ಮಂಡಳಿ ಈ ತಿಂಗಳು ಐಸಿಸಿಯಿಂದ ಸ್ವಲ್ಪ ಸಮಯ ಕೋರಿತ್ತು. ಅಲ್ಲದೇ, ಜೂ. 28ರೊಳಗೆ ಐಸಿಸಿಗೆ ತನ್ನ ನಿರ್ಧಾರ ತಿಳಿಸಬೇಕಾಗಿತ್ತು. ಈಗ ಬಿಸಿಸಿಐ ತನ್ನ ನಿರ್ಧಾರವನ್ನು ತೆಗೆದುಕೊಂಡಿದೆ. ಈ ವಿಶ್ವಕಪ್ ಸುಮಾರು ಒಂದು ತಿಂಗಳು ಕಾಲ ನಡೆಯಲಿದೆ.
ಸದ್ಯದ ಮಾಹಿತಿಯಂತೆ ಅ. 17ರಿಂದ ಪಂದ್ಯಾವಳಿ ಪ್ರಾರಂಭವಾಗಲಿದೆ. ಇದರಲ್ಲಿ ಮೊದಲ 8 ದೇಶಗಳ ನಡುವೆ ಅರ್ಹತಾ ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯ ಸ್ವರೂಪಕ್ಕೆ ಅನುಗುಣವಾಗಿ, ಈ ತಂಡಗಳಲ್ಲಿ 4 ತಂಡಗಳು ಸೂಪರ್ -12 ರಲ್ಲಿ ಈಗಾಗಲೇ ಶ್ರೇಯಾಂಕದ ಆಧಾರದ ಮೇಲೆ ಅರ್ಹತೆ ಪಡೆದ 8 ತಂಡಗಳೊಂದಿಗೆ ಆಡಲಿವೆ. ಇದು ಅಕ್ಟೋಬರ್ 24ರಿಂದ ಪ್ರಾರಂಭವಾಗಲಿದೆ.