ವಿಜಯಸಾಕ್ಷಿ ಸುದ್ದಿ, ನವಲಗುಂದ: ಯುಗಾದಿ ಉತ್ಸವದ ಅಂಗವಾಗಿ ನಡೆಯುತ್ತಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜೈಭೀಮ್ ಸಂಘಟನೆಯವರ ನೀಲಿ ಭಾವುಟಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ವಿವಿಧ ದಲಿತಪರ ಸಂಘಟನೆಯವರು ಇಲ್ಲಿಯ ಅಂಬೇಡ್ಕರ್ ಪುತ್ಥಳಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಬೃಹತ್ ಶೋಭಾಯಾತ್ರೆಯಲ್ಲಿ ನಮ್ಮ ಸಂಘಟನೆಯವರು ನೀಲಿ ಭಾವುಟ ಹಿಡಿದುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡುದ್ದೇವು. ಹಿಂದೂಗಳು ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮದಾಗಿತ್ತು. ಆದರೆ ಕೆಲವರಿಗೆ ಇದನ್ನು ಸಹಿಸಲಾಗದೇ ನೀಲಿ ಬಾವುಟವನ್ನು ಹರಿದು ಹಾಕಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅವಮಾನಿಸಿದ್ದಾರೆ.

ಈ ಅವಮಾನವನ್ನು ಖಂಡಿಸಿ ನಾವು ಲಿಂಗರಾಜ ವೃತ್ತದ ಬಳಿ ಪ್ರತಿಭಟನೆ ಮಾಡುತ್ತಿದ್ದೇವೆ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನಮ್ಮ ಮುಂದೆಯೇ ಹಾದು ಹೋದರು, ಆದರೆ ನಮಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಿಲ್ಲ.

ಶೋಭಾಯಾತ್ರೆಯ ಸಂಪೂರ್ಣ ವಿಡಿಯೋ ಚಿತ್ರೀಕರಣವನ್ನು ಪೊಲೀಸ್ ಇಲಾಖೆಯವರು ಮಾಡಿದ್ದಾರೆ. ಯಾರು ಬಾವುಟವನ್ನು ಹರಿದು ಹಾಕಿದ್ದಾರೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಂತಹ ಕಿಡಗೇಡಿಗಳನ್ನು ತಕ್ಷಣವೇ ಬಂಧಿಸಿ ನ್ಯಾಯ ಒದಗಿಸಬೇಕು. ದಲಿತರ್ಯಾರು ಇಲ್ಲಿ ಕುರಿಗಳಲ್ಲ, ನಾವೆಲ್ಲರೂ ಹುಲಿಗಳಾಗಿದ್ದು ನ್ಯಾಯ ಸಿಗುವವರೆಗೂ ಅಹೋರಾತ್ರಿ ಪ್ರತಿಭಟನೆ ಮಾಡುತ್ತೇವೆಂದು ನೇತೃತ್ವ ವಹಿಸಿದ್ದ ನಿಂಗಪ್ಪ ಕೆಳಗೇರಿ ಎಚ್ಚರಿಕೆ ನೀಡಿದರು.
ಪರಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಕಂಡ ಸಿಪಿಐ ಚಂದ್ರಶೇಖರ ಮಠಪತಿ, ಗ್ರೇಡ್ 2 ತಹಶೀಲ್ದಾರ್ ಎಂ.ಜೆ.ಹೊಕ್ರಾಣಿ, ಪಿಎಸ್‍ಐ ಕಲ್ಮೇಶ ಬೆನ್ನೂರ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ.

ಆದರೆ ಪ್ರತಿಭಟನಾಕಾರರು ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಕಿಡಗೇಡಿಗಳನ್ನು ಇಂದು ಬಂಧಿಸದಿದ್ದರೆ ಭಾನುವಾರದಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದು, ಆಯಕಟ್ಟಿನ ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸಿದ್ದಾರೆ.