ವಿಜಯಸಾಕ್ಷಿ ಸುದ್ದಿ, ಪಾಟ್ನಾ
ದೇಶದಲ್ಲಿ 18 ರಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ಲಸಿಕೆ ಹಾಕುವಲ್ಲಿ ಬಿಹಾರ್ ರಾಜ್ಯ ಮೊದಲ ಸ್ಥಾನದಲ್ಲಿದೆ. ಈ ವಯಸ್ಸಿನವರ 15,27,000 ಜನರಿಗೆ ಬಿಹಾರ ಈಗಾಗಲೇ ಲಸಿಕೆ ಹಾಕಿದೆ. ಇನ್ನುಳಿದಂತೆ ಉತ್ತರ ಪ್ರದೇಶದಲ್ಲಿ 15,14,761 ಮತ್ತು ರಾಜಸ್ಥಾನದಲ್ಲಿ 14,91,581 ಜನರಿಗೆ ಲಸಿಕೆ ಹಾಕಲಾಗಿದೆ.
ಬರೋಬ್ಬರಿ ಒಂದು ಮಿಲಿಯನ್ ಜನರಿಗೆ ಲಸಿಕೆ ಹಾಕುವ ಮೂಲಕ ಗುಜರಾತ್ ನಾಲ್ಕನೇ ಸ್ಥಾನದಲ್ಲಿದೆ. ಲಸಿಕೆ ನೀಡಲು ಆರಂಭಿಸಿದ ಕೇವಲ 16 ದಿನಗಳಲ್ಲಿಯೇ ಬಿಹಾರ ರಾಜ್ಯ ಇಷ್ಟೊಂದು ಜನರಿಗೆ ಲಸಿಕೆ ನೀಡಿ, ಮೊದಲ ಸ್ಥಾನಕ್ಕೆ ಏರಿದೆ. ಕೇಂದ್ರ ಸರ್ಕಾರದಿಂದ 3.50 ಲಕ್ಷ ಡೋಸ್ ಲಸಿಕೆ ಬರುತ್ತಿದ್ದಂತೆ, ಮೇ. 9 ರಂದು ಲಸಿಕೆ ನೀಡಲು ಆರಂಭಿಸಲಾಗಿತ್ತು. ಬಿಹಾರದಲ್ಲಿ 18 ರಿಂದ 44 ವರ್ಷದೊಳಗಿನವರಿಗೆ ಮೊದಲ ಆದ್ಯತೆ ನೀಡಲಾಗಿತ್ತು.
ರಾಜ್ಯದಾದ್ಯಂತ ಸುಮಾರು 624 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಲಸಿಕೆ ಹಾಕುವ ಬಗ್ಗೆ ಅರೆವೈದ್ಯಕೀಯ ಮತ್ತಿತರ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿತ್ತು ಎಂದು ಬಿಹಾರ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತ್ಯಯ್ ಅಮೃತ್ ಹೇಳಿದ್ದಾರೆ.
ರಾಜ್ಯಾದಾದ್ಯಂತ ಜಾಗೃತಿ ಮೂಡಿಸುವ ಮೂಲಕ ಲಸಿಕೆ ಪಡೆಯುವಂತೆ ಯುಜ ಜನತೆಯನ್ನು ಪ್ರೇರಿಪಿಸಲಾಗಿತ್ತು. 28 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಜುಲೈ 10ರೊಳಗೆ ಈ ಗುಂಪಿನ ಎಲ್ಲರಿಗೂ ಲಸಿಕೆ ಹಾಕಲಾಗುವುದು. ಎಲ್ಲ ವಯಸ್ಸಿನ ಜನರಿಂದ ಲಸಿಕೆ ಪಡೆಯಲು ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಪ್ರತ್ಯಯ್ ಅಮೃತ್ ತಿಳಿಸಿದ್ದಾರೆ.