




ಕೊಪ್ಪಳ ಕಣದಲ್ಲಿ ಸಿದ್ದು-ರಾಘಣ್ಣ ಮುಖಾಮುಖಿ!!
–ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಬಿಜೆಪಿಯಿಂದ ಸಿವಿಸಿ
–ಜೆಡಿಎಸ್‌ನಿಂದ ಕರಡಿ ಸಂಗಣ್ಣ ಅಖಾಡಕ್ಕೆ
–ಬಸವರಾಜ ಕರುಗಲ್
ವಿಜಯಸಾಕ್ಷಿ ವಿಶೇಷ ಸುದ್ದಿ, ಕೊಪ್ಪಳ: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ 2023ರ ವಿಧಾನಸಭಾ ಚುನಾವಣಾ ಅಖಾಡ ಸಾಕ್ಷಿಯಾಗಲಿದೆ. ಸಿದ್ದರಾಮಯ್ಯ ಅವರ ಮಾನಸ ಪುತ್ರ ಎಂದೇ ಬಿಂಬಿತಗೊಂಡಿರುವ ರಾಘವೇಂದ್ರ ಹಿಟ್ನಾಳ ಈ ತಮ್ಮ ರಾಜಕೀಯ ಗುರು ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಲಿದ್ದಾರೆ!
ಈಗಾಗಲೇ ರಾಜ್ಯದಲ್ಲಿ ಚುನಾವಣೆಯ ಗಾಳಿ ಬೀಸತೊಡಗಿದೆ. ವರ್ಷಾಂತ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ವಿಶೇಷವೆಂದರೆ ಕನ್ನಡ ನೆಲದ ದೊಡ್ಮನೆ ಎನಿಸಿರುವ ರಾಜ್‌ಕುಮಾರ್ ಕುಟುಂಬ, ಸಮಾಜ ಸೇವೆಯಲ್ಲಿ ವಿಶ್ವದಲ್ಲೇ ದೊಡ್ಡ ಹೆಸರು ಗಳಿಸಿರುವ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಪಿಆರ್‌ಕೆ ಎಂಬ ಹೊಸ ಪಕ್ಷ ಸ್ಥಾಪಿಸಲಿದ್ದು, ಕೊಪ್ಪಳ ಕಣದಿಂದ ರಾಘವೇಂದ್ರ ಹಿಟ್ನಾಳ ಪಿಆರ್‌ಕೆ ಪಕ್ಷ ಪ್ರತಿನಿಧಿಸಿ ಸ್ಪರ್ಧಿಸಲು ಒಂದು ಸುತ್ತಿನ ಮಾತು ಕತೆ ಮುಗಿದಿದೆ ಎಂದು ಪಿಆರ್‌ಕೆ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಇನ್ನು ಬಿಜೆಪಿಯಿಂದ ಸಿ.ವಿ.ಚಂದ್ರಶೇಖರ ಹೆಸರು ಅಂತಿಮಗೊಂಡಿದ್ದು, ಕಾಂಗ್ರೆಸ್ ಮುಖಂಡ ಸುರೇಶ ಭೂಮರಡ್ಡಿ ಬಿಜೆಪಿ ಸೇರುವ ಮೂಲಕ ಬೀಗರಾದ ಸಿ.ವಿ.ಸಿ.ಯವರ ಪರ ಮತಯಾಚಿಸಲಿದ್ದಾರೆ.
ಈಗಾಗಲೇ ಕೊಪ್ಪಳ ವಿಧಾನಸಭಾ ಕ್ಷೇತ್ರ ಸೇರಿದಂತೆ ಲೋಕಸಭಾ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪ್ರಭಾವ ಹೊಂದಿರುವ ಕರಡಿ ಫ್ಯಾಮಿಲಿ ಕಮಲವನ್ನು ಕೈಬಿಡಲಿದ್ದು, ಮತ್ತೇ ತೆನೆ ಹೊರುವ ಮುನ್ಸೂಚನೆ ಸಿಕ್ಕಿದ್ದು, ಸಂಸದ ಕರಡಿ ಸಂಗಣ್ಣ ಅವರಿಗೆ ಜೆಡಿಎಸ್ ಟಿಕೆಟ್ ಬಹುತೇಕ ಫೈನಲ್ ಆಗಿದೆ.
ಒಟ್ಟಾರೆ ಈ ಬಾರಿ ಚುನಾವಣಾ ಅಖಾಡ ಭಾರಿ ಸಂಚಲನ ಸೃಷ್ಟಿಸಿದ್ದು ಮಿತ್ರರು ವಿರೋಧಿಗಳಾದರೆ, ಶತ್ರುಗಳು ಆಪ್ತರಾಗುವ ಕಾಲ ಸನ್ನೀಹಿತ.
ಏಪ್ರಿಲ್ 24ಕ್ಕೆ ಪಿಆರ್‌ಕೆ ಪಕ್ಷ ಅಸ್ತಿತ್ವಕ್ಕೆ:
ಕರುನಾಡ ಚಕ್ರವರ್ತಿ ಎನಿಸಿರುವ ಡಾ.ಶಿವರಾಜ್‌ಕುಮಾರ್ ರಾಜಕೀಯದಿಂದ ನಮ್ಮ ಕುಟುಂಬ ದೂರ ಎಂದು ಹೇಳುತ್ತಲೇ ಬಂದವರು. ಈ ಹಿಂದೆ ಅವರ ಪತ್ನಿ ಗೀತಾ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದಾಗ ಪತ್ನಿ ಪರವಾಗಿ ಮತಯಾಚಿಸಿದ್ದರು. ಆನಂತರ ರಾಜಕೀಯದಿಂದ ದೂರವೇ ಉಳಿದಿದ್ದರು. ಇದೀಗ ಪುನೀತ್ ಅವರ ಸೋಷಿಯಲ್ ವರ್ಕ್ ಎಲ್ಲೆಡೆ ಪ್ರಶಂಸೆಗೊಳಗಾಗಿದ್ದು, ಅಭಿಮಾನಿಗಳು ಪುನೀತ್ ಮತ್ತು ಪುನೀತ್ ಕೆಲಸಗಳ ಸ್ಮರಣಾರ್ಥ ಪುನೀತ್ ಹೆಸರಿನಲ್ಲಿ ಪಕ್ಷ ಸ್ಥಾಪಿಸುವಂತೆ ಒತ್ತಾಯಿಸಿದ್ದರು. ಫಲವಾಗಿ ಪಿಆರ್‌ಕೆ ಪಕ್ಷ ಏಪ್ರಿಲ್ 24ರಂದು ರಾಜ್ ಜನ್ಮದಿನದಂದು ಅಸ್ತಿತ್ವಕ್ಕೆ ಬರಲಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಡಾ.ಶಿವರಾಜ್‌ಕುಮಾರ್ ಕಾರ್ಯನಿರ್ವಹಿಸಲಿದ್ದು, ವಿವಿಧ ಪಕ್ಷಗಳ ಪ್ರಭಾವಿ ಮುಖಂಡರು, ಚಿತ್ರ ತಾರೆಯರು ಶಿವಣ್ಣ ಸಂಪರ್ಕದಲ್ಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಾವಿಲ್ಲಿ ತಿಳಿಸಿರೋದು ಟ್ರೈಲರ್ ಮಾತ್ರ. ಪೂರ್ತಿ ವಿವರ ಗೊತ್ತಾಗಬೇಕಾದರೆ ಇಂದಿನ ವಿಜಯಸಾಕ್ಷಿ ಪತ್ರಿಕೆ ಓದಿ….