ವಿಜಯಸಾಕ್ಷಿ ಸುದ್ದಿ, ಗದಗ
ಬ್ಯಾಂಕ್ ಗೆ ಹಣ ಕಟ್ಟಲು ಹೋಗಿ ಬೈಕ್ ಸಮೇತ 7 ಲಕ್ಷ ರೂ. ಹಣ ದೋಚಿಕೊಂಡು ಪರಾರಿಯಾಗಿ ಪ್ರೇಯಸಿಯೊಂದಿಗೆ ರಾಜಸ್ಥಾನದಲ್ಲಿ ಐಶಾರಾಮಿ ಜೀವನ ಕಳೆಯುತ್ತಿದ್ದ ಆರೋಪಿ ರಾಮಸಿಂಗ್ ನನ್ನು ಬಂಧಿಸುವಲ್ಲಿ ಗದಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ವಿಕಾಸ್ ಜೈನ್ ಎಂಬುವವರ ಮಾಲೀಕತ್ವದ ಜೈನ್ ಟ್ರೇಡರ್ಸ್ ಎಂಬ ಹೋಲ್ ಸೇಲ್ ಕಿರಾಣಿ ಅಂಗಡಿಯಲ್ಲಿ ಆರೋಪಿ ರಾಮಸಿಂಗ್ ಕೆಲಸ ಮಾಡುತ್ತಿದ್ದ. ಈತನನ್ನು ಮಾಲೀಕರು ಮನೆಯ ಮಗನಂತೆ ನೋಡಿಕೊಂಡಿದ್ದರು. ಮನೆಯಲ್ಲಿಯೇ ಊಟ, ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ರಾಮಸಿಂಗ್ ಉಂಡ ಮನೆಯ ಜಂತಿ ಎಣಿಸಿದ್ದ.
ಕಳೆದ ತಿಂಗಳು ಜನೆವರಿ 19 ರಂದು ಜೈನ್ ಟ್ರೇಡರ್ಸ್ ಮಾಲೀಕ ವಿಕಾಸ್ ಜೈನ್ 7 ಲಕ್ಷ ರೂ. ಹಣ ಹಾಗೂ ಬೈಕ್ ಕೊಟ್ಟು ಏಕ್ಸಿಸ್ ಬ್ಯಾಂಕಿಗೆ ಹಣ ಕಟ್ಟಲು ಕಳುಹಿಸಿದ್ದರು. ಆದರೆ, ನಯವಂಚಕ ರಾಮಸಿಂಗ್, ಹಣ ಹಾಗೂ ದ್ವಿಚಕ್ರ ವಾಹನ ಸಮೇತ ನಾಪತ್ತೆಯಾಗಿದ್ದ.
ಹಣದೊಂದಿಗೆ ಪರಾರಿಯಾಗಿದ್ದ ರಾಮಸಿಂಗ್ ಕದ್ದ ಹಣವನ್ನೆಲ್ಲಾ ತನ್ನ ಪ್ರೇಯಸಿಯೊಂದಿಗೆ ಕಾಲ ಕಳೆಯಲು ಬಳಸಿಕೊಳ್ಳಲು ನಿರ್ಧರಿಸಿದ್ದನು. ಈ ನಿಟ್ಟಿನಲ್ಲಿ ರಾಜಸ್ಥಾನಕ್ಕೆ ಹೋಗಿ ತಾನು ಇದ್ದಲ್ಲಿಗೆ ತನ್ನ ಹುಡುಗಿಯನ್ನು ಕರೆಸಿಕೊಂಡು ಅಲ್ಲಲ್ಲಿ ಜಾಲಿ ರೇಡ್ ನಡೆಸುತ್ತಾ ಪಾರ್ಕ್ ಅದು-ಇದು ಎಂದು ಸುತ್ತಾಡುತ್ತಾ ಪ್ರಿಯತಮೆಯೊಂದಿಗೆ ಸುಖಿಯ ಜೀವನ ಕಳೆಯುತ್ತಿದ್ದ.
ಆದರೆ, ಪ್ರಕರಣದ ಬೆನ್ನಟ್ಟಿದ್ದ ಪೊಲೀಸರು ರಾಮಸಿಂಗ್ ನ ಕಾಲ್ ಡಿಟೇಲ್ಸ್ ಪಡೆದುಕೊಂಡು ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಯ ಸುಳಿವು ಸಿಕ್ಕಿದ್ದು, ಅಹ್ಮದಾಬಾದ್ ರೈಲು ನಿಲ್ದಾಣದಲ್ಲಿ ಆರೋಪಿ ರಾಮಸಿಂಗ್ ನನ್ನು ಬಂಧಿಸಿ ಕರೆ ತಂದಿದ್ದಾರೆ. ಪ್ರಿಯತಮೆ ಮೆಚ್ಚಿಸಲು ಆಕೆಗೆ ಖರ್ಚು ಮಾಡಿ ತೃಪ್ತಿ ಪಡಿಸಲು ಕಳ್ಳತನವೆಂಬ ದುರ್ಮಾರ್ಗ ಹಿಡಿದಿದ್ದ ರಾಮಸಿಂಗ್ ಸದ್ಯ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.
ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ಹಣ ಕಳೆದುಕೊಂಡಿದ್ದ ಜೈನ್ ಟ್ರೇಡರ್ಸ್ ಮಾಲೀಕ ವಿಕಾಸ್ ಜೈನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹಣ ವಾಪಸ್ ನೀಡಿದ್ದಕ್ಕೆ ಅಂಗಡಿ ಮಾಲೀಕ ವಿಕಾಸ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.