ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಮಹಾಮಾರಿಯಿಂದಾಗಿ ಲಾಕ್ ಡೌನ್ ಹೇರಲಾಗಿತ್ತು. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಈಗಾಗಲೇ ರಾಜ್ಯದ 19 ಜಿಲ್ಲೆಗಳಲ್ಲಿ ಹಲವು ಸಡಿಲಿಕೆಗಳನ್ನು ರಾಜ್ಯ ಸರ್ಕಾರ ಮಾಡಿದೆ. ಇದರೊಂದಿಗೆ ಅನ್ ಲಾಕ್ 2.0ಗೂ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಮಹಾಮಾರಿ ರಾಜ್ಯದ ಆರ್ಥಿಕತೆಯನ್ನು ಸಂಪೂರ್ಣವಾಗಿ ನುಂಗಿ ಹಾಕಿದೆ. ಬಡವರ ಪರಿಸ್ಥಿತಿ ಕೂಡ ಇದರಿಂದಾಗಿ ಶೋಚನೀಯವಾಗಿದೆ. ಇನ್ನೊಂದೆಡೆ ಕೊರೊನಾ ಹತೋಟಿಗೆ ಬರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಆರ್ಥಿಕತೆಗೆ ಪುನರ್ ಜೀವ ಕೊಡಲು ಮುಂದಾಗಲಾಗಿದೆ. ಈ ನಿಟ್ಟಿನಲ್ಲಿ ಜೂ. 21ರಿಂದ ರಾಜ್ಯಾದ್ಯಂತ ಅನ್ ಲಾಕ್ 2.0 ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಸಾರಿಗೆ ಸಂಚಾರ, ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲು ರಾಜ್ಯ ಸರ್ಕಾರದ ಮಟ್ಟದಲ್ಲಿ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತದೆ.
ಜೂ. 21ರಿಂದ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದ್ದು, ಶೇ. 50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇದರೊಂದಿಗೆ ಶಾಪಿಂಗ್ ಮಾಲ್, ಥಿಯೇಟರ್, ಜಿಮ್, ಚಿನ್ನದ ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ವಾಣಿಜ್ಯ ಮಳಿಗೆ ತೆರೆಯಲು ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರು ಕುಳಿತುಕೊಂಡು ತಿಂಡಿ ತಿನ್ನಲು ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆದರೆ, ಮೂರನೇ ಅಲೆಯ ಭಯ ಇರುವುದರಿಂದಾಗಿ ಈ ಎಲ್ಲ ಚಟುವಟಿಕೆಗಳನ್ನು ನಡೆಸಲು ದಿನಕ್ಕೆ ಕೇವಲ 8 ಗಂಟೆಯ ಅವಧಿ ನಿಗದಿಪಡಿಸುವ ಸಾಧ್ಯತೆ ಇದೆ. ಎಲ್ಲ ವ್ಯವಹಾರಗಳು ಕೋವಿಡ್ ನಿಯಮದಂತೆ ನಡೆಸಲು ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸುವ ಸಾಧ್ಯತೆ ಇದೆ.