ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಈಗಾಗಲೇ ಕೇಂದ್ರ ಸರ್ಕಾರವು ಸಿಬಿಎಸ್ ಇ 12 ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿದೆ. ಇದರ ಬೆನ್ನಲ್ಲಿಯೇ ರಾಜ್ಯದಲ್ಲಿಯೂ ಪಿಯುಸಿ ಪರೀಕ್ಷೆ ರದ್ದುಗೊಂಡಿದೆ. ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ.
ಕಳೆದ ವರ್ಷ ತಜ್ಞರು ನೀಡಿದ ಸಲಹೆಯ ಆಧಾರದಲ್ಲಿ ಎಸ್ಸೆಸ್ಸೆಲ್ಸಿ ನಡೆದಿತ್ತು. ಪಿಯುಸಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ಆದರೆ, ಕೊರೊನಾ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಬಹಳ ಅಪಾಯಕಾರಿ. ಹೀಗಾಗಿ ಪರೀಕ್ಷೆ ಎಂಬ ಅಡಕತ್ತರಿಯಲ್ಲಿ ಶಿಕ್ಷಣ ಇಲಾಖೆ ಸಿಲುಕಿತ್ತು.
ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ. ಪ್ರಥಮ ಪಿಯುಸಿ ಫಲಿತಾಂಶದ ಆಧಾರದ ಮೇಲೆ ಗ್ರೇಡಿಂಗ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೋವಿಡ್ ಅಪಾಯವಾಗಿ ಸೋಂಕು ಸ್ಫೋಟ ಆಗಬಹುದು. ಕೋವಿಡ್ ಸಾವು ನೋವು ಹೆಚ್ಚಾಗಬಹುದು ಎಂಬ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಕೊರೊನಾ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಬಾರದು. ಮಕ್ಕಳ ಶಿಕ್ಷಣಕ್ಕಿಂತ ಮಕ್ಕಳ ಜೀವ ನಮಗೆ ಮುಖ್ಯ. ಈ ಕೊರೊನಾ ವರ್ಷದಲ್ಲಿ ಪರೀಕ್ಷೆಯೇ ಬೇಡ. ಸಿಬಿಎಸ್ ಇ ಮಾದರಿಯಲ್ಲಿ ಎಲ್ಲರನ್ನು ಪಾಸ್ ಮಾಡಿ ಎಂಬ ಕೂಗು ಕೇಳಿ ಬಂದಿತ್ತು.
ಶೈಕ್ಷಣಿಕ ಗುಣಮಟ್ಟಕ್ಕೆ ಹೊಡೆತ ಬೀಳುವುದರ ಜೊತೆಗೆ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಹುದು. ನೀಟ್, ಸಿಇಟಿ ಸೀಟ್ ಹಂಚಿಕೆಯಲ್ಲಿ ಗೊಂದಲವಾಗಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲು ಏರಬಹುದು. ಅತ್ಯುತ್ತಮ ಕಾಲೇಜುಗಳಲ್ಲಿ ಪ್ರವೇಶಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಬಹುದು ಎಂಬ ಆತಂಕ ಕೂಡ ಕಾಡುತ್ತಿದೆ.