ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು
ನಾನಷ್ಟೇ ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲ್ಯಾಕೆ? ಸಿಬಿಐ ತನಿಖೆ ದ್ವೇಷದ ರಾಜಕಾರಣ ಅಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಸಿಬಿಐ ವಿಚಾರಣೆ ನಡೆಯುತ್ತಿದೆ. ನಾನೇನು ಮಾಡಲಾರದಂತಹ ಕೆಲಸ ಮಾಡಿಲ್ಲವಾದ್ದರಿಂದ ಹೆದರುವ ಅವಶ್ಯಕತೆ ಇಲ್ಲ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ನನ್ನ ವಿರುದ್ಧ ತನಿಖೆ ಮಾಡುವಂತೆ ಸಿಬಿಐಗೆ ಅನುಮತಿ ನೀಡಿದ್ದಾರೆ ಎಂದರು.
‘ ಇದುವರೆಗೂ ಯಾರ ಮೇಲೆಯೂ ಈ ರೀತಿ ತನಿಖೆ ಮಾಡಿಸಿಲ್ಲ. ನನ್ನ ಮೇಲೆ ಯಾವುದಾದರೂ ದೂರು ದಾಖಲಾಗಿದೆಯಾ? ಆರೋಪ ಸಾಬೀತಾಗಿದೆಯಾ? ಲಂಚ ಪಡೆದಿದ್ದೇನಾ? ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೇನಾ? ಇಂಧನ ಸಚಿವನಾಗಿದ್ದಾಗ ಅಕ್ರಮ ಮಾಡಿದ್ದೇನಾ? ಅವರದೇ ಸರ್ಕಾರವಿರುವಾಗ ಈ ಎಲ್ಲದರ ಬಗ್ಗೆ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಸಿಬಿಐಗೆ ಕೊಡುವ ಅಗತ್ಯವೇನಿತ್ತು? ‘ ಎಂದು ಪ್ರಶ್ನಿಸಿದರು.
‘ಇದೊಂದು ತನಿಖೆ ಮಾಡುವ ಪ್ರಕರಣವಲ್ಲವೆಂದು ಅಡ್ವೊಕೇಟ್ ಜನರಲ್ ಅವರೇ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿರುವ ಎಸಿಬಿಯಿಂದಲೇ ವಿಚಾರಣೆ ನಡೆಸಬಹುದುಂದು ತಿಳಿಸಿದ್ದಾರೆ. ಆದರೂ ಸರ್ಕಾರದ ಒತ್ತಡದ ಮೇಲೆ ಈ ವಿಚಾರಣೆ ನಡೆಯುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದರು.
ನಾನು ಸಿಬಿಐ ಅಧಿಕಾರಿಗಳ ಕಾರ್ಯ ಪ್ರಶ್ನಿಸುವುದಿಲ್ಲ. ಅವರು ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ, ನಮಗೆ ಯಾವುದೇ ತರಹದ ತೊಂದರೆ ನೀಡುತ್ತಿಲ್ಲ. ಅಲ್ಲದೇ, ವಿಚಾರಣೆ ವೇಳೆ ಸಿಬಿಐ ಕಚೇರಿ ಬಳಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ನೇಹಿತರು ಸೇರಿದಂತೆ ಯಾರೂ ಬರಬಾರದು ಎಂದು ಮನವಿ ಮಾಡಿಕೊಂಡರು.