ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯದಲ್ಲಿ ಇತ್ತೀಚೆಗಷ್ಟೇ ಪಿಎಸೈ ಪರೀಕ್ಷೆಯ ಅಕ್ರಮ ಹಗರಣದ ಕಮಟು ಮಾಸುವ ಮುನ್ನವೇ ಇಂಥದ್ದೇ ಮತ್ತೊಂದು ಪರೀಕ್ಷಾ ಅಕ್ರಮ ನಡೆದಿರುವ ಬಗ್ಗೆ ವರದಿಯಾಗಿದ್ದು, ದಂಗುಬಡಿಸುವಂತಿದೆ.
ಇತ್ತೀಚೆಗಷ್ಟೇ ಕೆಪಿಟಿಸಿಎಲ್ ನ ಕಿರಿಯ ಸಹಾಯಕ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇತೃತ್ವದಲ್ಲಿ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಾಂಗವಾಗಿ ನಡೆದಿತ್ತು. ಆದರೆ, ಸದರಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗವಾದ ವಿಷಯದ ಜಾಡು ಹಿಡಿದು ಹೊರಟ ಸೈಬರ್ ಕ್ರೈಂ ಪೊಲೀಸರು ನೇರ ಬಂದು ತಲುಪಿದ್ದು ಗದಗಕ್ಕೆ!
ನಡೆದಿದ್ದೇನು?: ಗದಗನಲ್ಲಿಯೇ ಪರೀಕ್ಷಾ ಪತ್ರಿಕೆ ಲೀಕ್ ಆಗಿದೆಯೆಂಬ ವಿಷಯದ ಬೆನ್ನುಬಿದ್ದ ಬೆಳಗಾವಿಯ ಸೈಬರ್ ಕ್ರೈಂ ಪೊಲೀಸರಿಗೆ ಆಘಾತಕಾರಿ ವಿಷಯ ಕಾದಿತ್ತು. ಗದಗನ ಮುನ್ಸಿಪಲ್ ಕಾಲೇಜ್ ನಲ್ಲಿ ನಡೆದ ಪರೀಕ್ಷೆಯಲ್ಲಿ ತಂದೆ-ಮಗ ಸೇರಿಕೊಂಡು ಪಶ್ನೆಪತ್ರಿಕೆ ಸೋರಿಕೆಗೆ ಕೈಜೋಡಿಸಿರುವ ವಿಷಯ ಬೆಳಗಾವಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಮುನ್ಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಹಾಗೂ ಅವರ ಮಗ ಸಮೀತಕುಮಾರ್ ಕೈ ಚಳಕ ತೋರಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ. ಇದೀಗ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಶ್ನೆಪತ್ರಿಕೆ ಲೀಕ್ ಆಗಿದ್ದು ಹೇಗೆ?
ಪತ್ರಕರ್ತನ ಸೋಗಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಪಡೆದ ಉಪ ಪ್ರಾಚಾರ್ಯ ಮಾರುತಿ ಸೋನಾವನೆ
ಮಗ ಸಮೀತಕುಮಾರ್, ತನ್ನ ಮೊಬೈಲ್ ಮೂಲಕ ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ಸೆರೆ ಹಿಡಿದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೆ, ರಾಜ್ಯದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳಿಗೂ ಪ್ರಶ್ನೆ ಪತ್ರಿಕೆ ಕಳಿಸಿರುವ ಸಾಧ್ಯತೆ ಇದೆ ಸೈಬರ್ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಮೀತ್ ಕುಮಾರನ ಮೊಬೈಲ್ ಗಾಗಿ ಪೊಲೀಸರು ಕಸ-ಕಂಟಿಗಳಲ್ಲೂ ತೀವ್ರ ಶೋಧ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಕಾಲೇಜು ಪ್ರಾಚಾರ್ಯ ಕುಲಕರ್ಣಿ ಅವರನ್ನು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಪ್ರಾಚಾರ್ಯರು ಕಣ್ಣೀರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

2022ರ ಆಗಸ್ಟ್ 7ರಂದು ಪ್ರಸ್ತುತ ಪರೀಕ್ಷೆ ನಡೆದಿದ್ದು, ಗದಗ-ಬೆಟಗೇರಿ ಅವಳಿ ನಗರದ 21 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಇದೀಗ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಜಾಡು ಹಿಡಿದು ಬಂದ ಬೆಳಗಾವಿ ಸೈಬರ್ ಕ್ರೈಮ್ ಪೊಲೀಸ್ ಇನ್ಸ್‌ಪೆಕ್ಟರ್ ವೀರೇಶ್ ದೊಡಮನಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ ಸೈಬರ್ ಕ್ರೈಂ ಪೊಲೀಸರು ತೀವ್ರ ಶೋಧಕಾರ್ಯ, ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕೃತ್ಯದ ಹಿಂದೆ ಇನ್ನೂ ಯಾರ್ಯಾರು ಶಾಮೀಲಾಗಿದ್ದಾರೆ ಎಂಬ ವಿಷಯ ತನಿಖೆಯ ನಂತರವಷ್ಟೇ ತಿಳಿದು ಬರಲಿದೆ ಎಂದು ಮೂಲಗಳು ತಿಳಿಸಿವೆ.