ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಹೀಗಾಗಿ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಲೇಬೇಕು. ಇಲ್ಲವೇ ಬೇರೆ ಪರಿಹಾರ ಇಲ್ಲ ಎಂದು ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮೇ ಮಧ್ಯ ಭಾಗದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಲಕ್ಷ ಮೀರುವ ಸಾಧ್ಯತೆ ಇದೆ. ಜೂನ್ ಮೊದಲ ವಾರದಲ್ಲಿ ಶೇ. 80ರಷ್ಟು ಸೋಂಕು ಹೆಚ್ಚಳವಾಗಬಹುದು. ಹೀಗಾಗಿ ದೀರ್ಘಾವಧಿಯ ಲಾಕ್ ಡೌನ್ ನಿಂದಾಗಿ ಮಾತ್ರ ಸೋಂಕನ್ನು ತಡೆಗಟ್ಟಬಹುದು. ಹೀಗಾಗಿ 15 ದಿನ ಲಾಕ್ ಡೌನ್ ಮಾಡಿದರೆ ಪರಿಣಾಮ ಹೆಚ್ಚಾಗಿರುತ್ತದೆ. ಏಕಾಏಕಿ ಲಾಕ್ ಡೌನ್ ಘೋಷಿಸದೆ ಹಂತ – ಹಂತವಾಗಿ ವಿನಾಯಿ ನೀಡುತ್ತ ಲಾಕ್ ಡೌನ್ ತೆರೆಯಬೇಕು ಎಂದು ಸರ್ಕಾರಕ್ಕೆ ಐಐಎಸ್ಸಿ ಎಚ್ಚರಿಕೆ ನೀಡಿದೆ.
ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷರಾದ ಡಾ. ಪ್ರಸನ್ನ ಅವರು, ಸದ್ಯ ಜನರ ಜೀವ ಉಳಿಸಲು ಲಾಕ್ ಡೌನ್ ಒಂದೇ ಪರಿಹಾರವಾಗಿದೆ. ಜನರ ಜೀವ ಉಳಿದರೆ ಆರ್ಥಿಕತೆ ತನ್ನಿಂದ ತಾನೇ ಸರಿಯಾಗುತ್ತದೆ. ಸದ್ಯ ಹಳ್ಲಿಗಳಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ. ಇನ್ನೊಂದೆಡೆ ಆರೋಗ್ಯ ವಲಯದ ಮೇಲೆಯೂ ವಿಪರೀತ ಒತ್ತಡ ಬೀಳುತ್ತಿದೆ. ಸಿಬ್ಬಂದಿಗೂ ಸೋಂಕು ಹರಡುತ್ತಿದ್ದು, ಅಭಾವ ಶುರುವಾಗುತ್ತಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಸಂಪೂರ್ಣ ಲಾಕ್ ಡೌನ್ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.
ಆದರೆ, ಸರ್ಕಾರ ಮಾತ್ರ ಲಾಕ್ ಡೌನ್ ಘೋಷಿಸಲು ಮುಂದಾಗುತ್ತಿಲ್ಲ. ಕೇರಳದಲ್ಲಿ ಒಂದು ವಾರಗಳ ಕಾಲ ಕಂಪ್ಲೀಟ್ ಲಾಕ್ ಡೌನ್ ಘೋಷಿಸಲಾಗಿದೆ. ಮೇ. 8 ರಿಂದ 16ರ ವರೆಗೆ ಕೇರಳ ಸ್ತಬ್ಧವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕೂಡ ಲಾಕ್ ಡೌನ್ ನಿಂದಾಗಿ ಸೋಂಕಿನ ಪ್ರಮಾಣ ಇಳಿಮುಖ ಕಾಣುತ್ತಿದೆ. ಆದರೆ, ರಾಜ್ಯದಲ್ಲಿ ಮಾತ್ರ ಈ ನಿರ್ಧಾರ ಕೈಗೊಳ್ಳುತ್ತಿಲ್ಲ.