ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಗದಗ ಜಿಲ್ಲೆಯೂ ಸೇರಿದಂತೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಅಲ್ಲದೇ, ಹಲವು ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಕಲಬುರಗಿ ಜಿಲ್ಲೆಯಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾರೆ.
ಗದಗ ತಾಲೂಕಿನ ಹೊಂಬಳ, ವೆಂಕಟಾಪೂರ ಜಿಲ್ಲೆಯ ನರಗುಂದದಲ್ಲೂ ಮಳೆಯಾಗಿದೆ. ನರಗುಂದದ ಯಡಿಯೂರು ಸಿದ್ಧಲಿಂಗೇಶ್ವರ ಶಾಲೆಯ ಆವರಣದಲ್ಲಿನ ತಿಂಗಿನ ಮರಕ್ಕೆ ಬೆಂಕಿ ಬಿದ್ದಿದೆ. ಹಾವೇರಿ ಜಿಲ್ಲೆಯಲ್ಲಿ ಮೂರು ತೆಂಗಿನ ಮರಗಳು ಹೊತ್ತಿ ಉರುದಿವೆ. ದಾವಣಗೆರೆಯಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿವೆ. ಹುಬ್ಬಳ್ಳಿ, ಹಾವೇರಿ, ಕಲಬುರಗಿ, ದಾವಣಗೆರೆ ಹಾಗೂ ಮಲೆನಾಡು ಪ್ರದೇಶ, ಕರಾವಳಿ ಪ್ರದೇಶದ ಹಲವು ಭಾಗಗಳಲ್ಲಿ ಮಳೆ ಭರ್ಜರಿಯಾಗಿ ಸುರಿದಿದೆ.

ಕಲಬುರಗಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಹೀಗಾಗಿ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾನೆ. ಭೋಜರಾಜ ಅತನೂರೆ (54) ಸಾವಿಗೀಡಾದ ದುರ್ದೈವಿ ರೈತ. ದಾವಣಗೆರೆ ಜಿಲ್ಲೆಯ ಹರಿಹರ, ಹರಪ್ಪನಹಳ್ಳಿ ಸೇರಿದಂತೆ ಹಲವು ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ.
ಹಾವೇರಿ ನಗರದ ಹತ್ತರಗೇರಿ ಓಣಿಯಲ್ಲಿ ಸಿಡಿಲು ಬಡಿದು ಮೂರು ತೆಂಗಿನ ಮರಗಳು ಹೊತ್ತಿ ಉರಿದಿವೆ. ತಕ್ಷಣವೇ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹುಬ್ಬಳ್ಳಿ ನಗರ ಹಾಗೂ ಸುತ್ತಮುತ್ತಲಿನ ಕೆಲವು ಹಳ್ಳಿಗಳಲ್ಲಿ ಮಳೆ ಸುರಿದಿದೆ. ನಗರದ ತುಂಬಾ ಮಳೆ ಉತ್ತಮವಾಗಿ ಸುರಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಜನರು ಪರದಾಟ ನಡೆಸಿದ್ದಾರೆ. ಅಲ್ಲದೇ, ರಸ್ತೆಗಳು ತುಂಬಿ ಹರಿದಿವೆ. ಶಿವಮೊಗ್ಗ ಹಾಗೂ ಮಡಿಕೇರಿ ಸುತ್ತಮುತ್ತ ಮಳೆ ಉತ್ತಮವಾಗಿ ಸುರಿದ ವರದಿಯಾಗಿದೆ.