ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಕೆಲವು ದಿನಗಳಿಂದ ಲಸಿಕೆಯ ಅಭಾವ ಸೃಷ್ಟಿಯಾಗಿತ್ತು. ಇದರಿಂದಾಗಿ ಸಾಕಷ್ಟು ಅವಾಂತಾರಗಳು ಉಂಟಾಗಿದ್ದವು. ಆದರೆ, ಸದ್ಯ ಕಳೆದ ಕೆಲವು ದಿನಗಳಿಂದ ತೀವ್ರವಾಗಿ ಲಸಿಕೆ ಕೊರತೆ ಎದುರಿಸುತ್ತಿರುವ ಕರ್ನಾಟಕಕ್ಕೆ ಕೊರೊನಾ ಲಸಿಕೆ ಪೂರೈಕೆ ಆಗಿದೆ. ರಾಜ್ಯ ಸರ್ಕಾರದ ನೇರ ಖರೀದಿ ಪ್ರಕ್ರಿಯೆಯಿಂದಾಗಿ 2 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆ ರಾಜ್ಯಕ್ಕೆ ಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ರಾಜ್ಯದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ ದೇಶದ 25 ನಗರಗಳಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಕೊವ್ಯಾಕ್ಸಿನ್ ಲಸಿಕೆ ಪೂರೈಸುವುದಾಗಿ ಭಾರತ್ ಬಯೋಟೆಕ್ ಸಂಸ್ಥೆ ಒಪ್ಪಿಗೆ ಸೂಚಿಸಿದೆ. ಸದ್ಯ ರಾಜ್ಯದಲ್ಲಿ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಎರಡೂ ಲಸಿಕೆಗಳು ಬಂದಿರುವುದರಿಂದಾಗಿ ಜನ ನೆಮ್ಮದಿಯಿಂದ ಉಸಿರಾಡುತ್ತಿದ್ದಾರೆ.
ಈ ಲಸಿಕೆಗಳನ್ನು ಆನಂದರಾವ್ ವೃತ್ತದ ಉಗ್ರಾಣದಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಎರಡನೇ ಡೋಸ್ ಲಸಿಕೆ ಪಡೆಯಲು ಜನರು ಕಾಯುತ್ತಿದ್ದು, ಸದ್ಯ 2 ಲಕ್ಷ ಡೋಸ್ ಪೂರೈಕೆ ಆಗಿರುವುದರಿಂದ ಪರಿಸ್ಥಿತಿ ನಿಭಾಯಿಸುವುದು ಕೊಂಚ ಸುಲಭವಾಗಲಿದೆ.
ಲಸಿಕೆಯ ವಿವರದ ಜತೆಗೆ ಕೊವಿನ್ ಪೋರ್ಟಲ್ ನಲ್ಲಿ ಯಾವ ಕೇಂದ್ರಗಳಲ್ಲಿ ಉಚಿತ ಲಸಿಕೆ ಲಭ್ಯವಿದೆ ಹಾಗೂ ಯಾವ ಕೇಂದ್ರದಲ್ಲಿ ಹಣಕೊಟ್ಟು ಲಸಿಕೆ ಪಡೆಯಬೇಕು ಎಂಬ ವಿವರವೂ ಸಿಗಲಿದೆ.