ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ದಿನಕ್ಕೆ ಇಂದಿಗೆ 25 ವರ್ಷಗಳು ತುಂಬಿವೆ. ಅವಧಿ ಚಿಕ್ಕದಾದರೂ ಅವರ ಸಾಧನೆ ಊಹೆಗೆ ಮೀರಿದ್ದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕೊಂಡಾಡಿದ್ದಾರೆ.
ದೇವೇಗೌಡ ಅವರು ಪ್ರಧಾನಿಯಾಗಿ ಇಂದಿಗೆ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸರಣಿ ಟ್ವೀಟ್ ಗಳನ್ನು ಮಾಡಿ, ತಂದೆಯ ಕಾರ್ಯ ಸ್ಮರಿಸಿ, ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು, ಮಣ್ಣಿನ ಮಗ, ರಾಜ್ಯದ ಹೆಮ್ಮೆಯ ಸುಪುತ್ರ ಎಚ್.ಡಿ. ದೇವೇಗೌಡ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನ ಇಂದು. ಈ ದಿನ ಭರ್ತಿ 25 ವರ್ಷಗಳನ್ನು ಪೂರೈಸಿದೆ. ಹೀಗಾಗಿ ನಾವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಐಟಿ ಉದ್ಯಮಕ್ಕೆ ಹತ್ತು ವರ್ಷಗಳ ಕಾಲ ಟ್ಯಾಕ್ಸ್ ಹಾಲಿಡೇ, ಬಾಂಗ್ಲಾ ದೇಶ ಹಾಗೂ ಭಾರತದ ನಡುವಿನ ಗಂಗಾ ನದಿ ವಿವಾದ ಬಗೆಹರಿಸಿದ್ದು ದೇವೇಗೌಡ ಅವರ ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ. ಈಶಾನ್ಯದ ರಾಜ್ಯಗಳಿಗೆ ಭೇಟಿ ನೀಡಿ ಬರೋಬ್ಬರಿ ರೂ. 6 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದರು.
ಏರ್ ಪೋರ್ಟ್, ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳು, ವಿಶ್ವವಿದ್ಯಾಲಯಗಳನ್ನು ನಿರ್ಮಿಸಲು ವಿಶೇಷ ಅನುದಾನ ನೀಡಿದ್ದರು. ಅಂದು ಕಾಶ್ಮೀರಕ್ಕೆ ಐದು ಬಾರಿ ಭೇಟಿ ನೀಡಿ, ರೂ. 3 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದರು. ದೆಹಲಿ ಮೆಟ್ರೋಗೆ ಚಾಲನೆ ನೀಡಿದ್ದರು. ನಾಗಾ ಬಂಡುಕೋರರೊಂದಿಗೆ ಶಾಂತಿ ಮಾತುಕತೆ ನಡೆಸಿ ಯುದ್ದವಿರಾಮ ಘೋಷಿಸಿದ್ದರು. ಕೇವಲ ಕಡಿಮೆ ಅವಧಿಯಲ್ಲಿ ದೇಶಕ್ಕೆ ಆಗುವ ಅಪಾಯ ತಪ್ಪಿಸಿ, ಸಾಕಷ್ಟು ಅಭಿವೃದ್ಧಿಕಾರ್ಯಗಳನ್ನು ಮಾಡಿದ್ದಲ್ಲದೆ, ದೇಶದ ಮೂಲೆ ಮೂಲೆಯ ಜನರ ನೋವು ಆಲಿಸಿ, ಪರಿಹರಿಸುವ ಕಾರ್ಯವನ್ನು ಅಂದು ದೇವೇಗೌಡ ಅವರು ಮಾಡಿದ್ದರು ಎಂದು ಕುಮಾರಸ್ವಾಮಿ ನೆನೆದು ಜನರೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ದೇವೇಗೌಡ ಅವರು, 11 ತಿಂಗಳುಗಳ ಕಾಲ ಅಧಿಕಾರ ನಡೆಸಿದ್ದರು. ಅವರು ಅಧಿಕಾರ ವಹಿಸಿದ್ದ ಆ ದಿನಕ್ಕೆ ಇಂದಿಗೆ 25 ವರ್ಷಗಳು ಕಳೆದಿವೆ. ಹೀಗಾಗಿ ಜೆಡಿಎಸ್ ಪಕ್ಷದಿಂದ ಬೆಳ್ಳಿ ಹಬ್ಬದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ಮಣ್ಣಿನ ಹೆಮ್ಮೆಯ ಮಗನಿಗೆ ರಾಜ್ಯದ ಜನರು ಕೂಡ ಹಾರೈಸುತ್ತಿದ್ದಾರೆ.