ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಳ್ಳಿಯಿಂದ ನಗರದವರೆಗೆ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ 75ನೇ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ಸವಿನೆನಪಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ಅಮೃತ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ‍್ಯ ಸಂಭ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣದ ಬಳಿಕ ರಾಜ್ಯವನ್ನುದ್ದೇಶಿಸಿ ಅವರು ಮಾತನಾಡಿದರು.
ಅಮೃತ ಗ್ರಾಮ ಪಂಚಾಯ್ತಿ ಯೋಜನೆ, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃತ ರೈತ ಉತ್ಪಾದಕರ ಸಂಸ್ಥೆ ಯೋಜನೆ, ಅಮೃತ ಶಾಲಾ ಸೌಲಭ್ಯ ಯೋಜನೆ, ಅಮೃತ ಕಿರು ಉದ್ದಿಮೆ ಯೋಜನೆ, ಅಮೃತ ಅಂಗನವಾಡಿ ಯೋಜನೆ ಸೇರಿದಂತೆ ವಿವಿಧ ಅಮೃತ ಯೋಜನೆಗಳನ್ನು ಘೋಷಣೆ ಮಾಡಿದರು.
ಅಮೃತ ಗ್ರಾಮ ಪಂಚಾಯ್ತಿ ಯೋಜನೆಯಡಿ ಗ್ರಾಮೀಣ ವಸತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.
750 ಗ್ರಾಮ ಪಂಚಾಯತಿಗಳಲ್ಲಿ ವಸತಿ ರಹಿತರು, ಬಡವರನ್ನು ಗುರುತಿಸಿ, ವಸತಿ ಯೋಜನೆ ರೂಪಿಸಲಾಗುತ್ತದೆ. ಬೀದಿದೀಪ, ಪ್ರತಿಮನೆಗೆ ಕುಡಿಯುವ ನೀರು ಪೂರೈಕೆ, ಶೇ.100ರಷ್ಟು ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ನೀರನ್ನು ವೈಜ್ಞಾನಿಕ ವಿಲೇವಾರಿ, ಸೌರ ವಿದ್ಯುತ್ ಬಳಕೆಗೆ ಉತ್ತೇಜನ ನೀಡಲಾಗುವುದು ಎಂದರು.
ಅಮೃತ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಿ ಪ್ರತಿ ಸಂಘಕ್ಕೆ ತಲಾ 30 ಲಕ್ಷ ರೂಪಾಯಿ ಸಹಾಯಧನ ನೀಡಿ, ರೈತರಿಗೆ ವಿವಿಧ ಯೋಜನೆಗಳ ಪ್ರಯೋಜನ ಒದಗಿಸಿಕೊಡಲಾಗುತ್ತದೆ.
ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಅಮೃತ ಶಾಲಾ ಸೌಲಭ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 750 ಶಾಲೆಗಳ ಸಮಗ್ರ ಮೂಲಭೂತ ಸೌಕರ್ಯ ಕಲ್ಪಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ.
ಶಾಲೆಗಳಲ್ಲಿನ ಡಿಜಿಟಲ್ ಗ್ರಂಥಾಲಯ, ಸುಸಜ್ಜಿತ ಶಾಲೆಗಳ ನಿರ್ಮಾಣ, ಪ್ರಯೋಗಾಲಯ, ಶಾಲಾ ಶೌಚಾಲಯ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಅಮೃತ ಅಂಗನವಾಡಿ ಯೋಜನೆಯಡಿ ರಾಜ್ಯದಲ್ಲಿ 750 ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಪ್ರತಿ ಅಂಗನವಾಡಿಗಳಿಗೆ 1 ಲಕ್ಷ ನೀಡುವ ಮೂಲಕ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
ಅಮೃತ ನಿರ್ಮಲ ನಗರ ಯೋಜನೆ ಅನುಷ್ಠಾನಗೊಳಿಸುವ ಮೂಲಕ, ಸ್ಥಳೀಯ ಸಂಸ್ಥೆಗಳನ್ನು 75 ಕೋಟಿ ವೆಚ್ಚದಲ್ಲಿ ಸೌಂದರ್ಯ ಕಾಪಾಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಪ್ರತಿ ಸ್ಥಳೀಯ ಸಂಸ್ಥೆಗಳಿಗೆ 1 ಕೋಟಿ ನೀಡಲಾಗುತ್ತದೆ. ಇದಕ್ಕಾಗಿ 75 ಕೋಟಿ ಅನುದಾನ ನೀಡಲಾಗುತ್ತದೆ. ಅಮೃತ ಕಿರು ಉದ್ದಿಮೆ ಯೋಜನೆ ಅನುಷ್ಠಾನದ ಮೂಲಕ ಸ್ವಸಹಾಯಕ ಸಂಘಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.