-ಬೆಳಗಾವಿಯಿಂದ ಬಳ್ಳಾರಿವರೆಗೆ ಕೆಆರ್‌ಎಸ್‌ನಿಂದ ಚಲಿಸು ಕರ್ನಾಟಕ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯ ಕೊರೋನಾ ವೈರಸ್‌ನಿಂದ ನಲುಗಿದಂತೆ ಭ್ರಷ್ಟ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಿಂದ ಸೊರಗಿದೆ. ರಾಜ್ಯ ಸರಕಾರದ ದುರಾಡಳಿತ, ಭ್ರಷ್ಟಾಚಾರ ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಬೆಳಗಾವಿಯಿಂದ ಬಳ್ಳಾರಿವರೆಗೆ ಸುಮಾರು 300 ಕಿ.ಮೀ. ಸೈಕಲ್ ಯಾತ್ರೆ ಹಮ್ಮಿಕೊಂಡಿದೆ ಎಂದು ಕೆಆರ್‌ಎಸ್‌ಪಿ ಮುಖಂಡ ಪ.ಯ.ಗಣೇಶ ತಿಳಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 30ರಂದು ಕಿತ್ತೂರಿನಿಂದ ಆರಂಭಗೊಂಡಿರುವ ಸೈಕಲ್ ಯಾತ್ರೆಗೆ ಹಿರಿಯ ಸಾಮಾಜಿಕ ಹೋರಾಟಗಾರ, ಚಿಂತಕ ಎಸ್.ಆರ್.ಹಿರೇಮಠ ಚಾಲನೆ ನೀಡಿದರು. ಡಿಸೆಂಬರ್ 3ರಂದು ಭಾನಾಪುರದವರೆಗೆ ಆಗಮಿಸುವ ಸೈಕಲ್ ಯಾತ್ರೆ ಡಿಸೆಂಬರ್ 4ರಂದು ಕೊಪ್ಪಳಕ್ಕೆ ಆಗಮಿಸಿ ನಗರದ ಮೂರು ಕಡೆ ಸಾರ್ವಜನಿಕರನ್ನು ಉದ್ದೇಶಿಸಿ ಮುಖಂಡರು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಡಿಸೆಂಬರ್ 7ರಂದು ಬಳ್ಳಾರಿಯಲ್ಲಿ ಸೈಕಲ್ ಯಾತ್ರೆ ಸಮಾರೋಪಗೊಳ್ಳಲಿದ್ದು, ಆನಂತರ ನಮ್ಮ ಪಕ್ಷವು ಗ್ರಾಪಂ ಚುನಾವಣೆಯತ್ತ ಗಮನ ಹರಿಸಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಆರ್‌ಪಿಯ ಮುಖಂಡ ಪ್ರಶಾಂತ್ ಕೆ. ಇದ್ದರು.