ವಿಜಯಸಾಕ್ಷಿ ಸುದ್ದಿ, ಹಾವೇರಿ
ತಹಸೀಲ್ದಾರ್ ಎದುರೇ ರೈತರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ನಡೆದಿದೆ. ಜಮೀನಿನಲ್ಲಿ ರಸ್ತೆ ನಿರ್ಮಾಣದ ವಿಷಯಕ್ಕೆ ಸಂಬಂಧಿಸಿದಂತೆ ಪರಮೇಶ್ವರ ಕಂಬಳಿ ಎಂಬ ರೈತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ.
ಪೊಲೀಸರೊಂದಿಗೆ ಏಕವಚನದಲ್ಲಿ ಮಾತನಾಡುತ್ತಿಯಾ ಎಂದು ಪೊಲೀಸರು ರೈತನನ್ನು ಥಳಿಸಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸ್ ಕಾನಸ್ಟೇಬಲ್ ಹರೀಶ ಹಾಲಭಾವಿ ಹಾಗೂ ಮೋಹನ್ ಮೇಲಗೇರಿ ಎಂಬುವವರೇ ಹಲ್ಲೆ ನಡೆಸಿದ್ದಾರೆ.
ಕಲ್ಲು ಕ್ವಾರಿ ಹಾಗೂ ಅದರ ಅಕ್ಕಪಕ್ಕದ ಕೆಲವು ರೈತರ ಜಮೀನಿಗೆ ಹೋಗಲು ರಸ್ತೆ ನಿರ್ಮಾಣಕ್ಕೆ ಕೆಲವರು ಮುಂದಾಗಿದ್ದರು. ಈ ಸಂದರ್ಭದಲ್ಲಿ ರಸ್ತೆ ನಿರ್ಮಾಣಕ್ಕೆ ಪರಮೇಶ್ವರ ಸೇರಿದಂತೆ ಇಬ್ಬರು ರೈತರು ವಿರೋಧ ವ್ಯಕ್ತಪಡಿಸಿದ್ದರು.
ಜಮೀನಿನಲ್ಲಿ ರಸ್ತೆ ಇಲ್ಲದಿದ್ದರೂ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆಂದು ಆರೋಪಿಸಿ ರಸ್ತೆ ನಿರ್ಮಾಣಕ್ಕೆ ರೈತರು ವಿರೋಧಿಸಿದ್ದರು. ರಸ್ತೆ ನಿರ್ಮಾಣಕ್ಕೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಸಹೋದರ ಡಾಕೇಶ ಲಮಾಣಿ ಹಾಗೂ ಕೆಲವು ರೈತರು ಮುಂದಾಗಿದ್ದರು.

ಸ್ಥಳಕ್ಕೆ ಭೇಟಿ ನೀಡಿ ತಹಶೀಲ್ದಾರ ಶಂಕರ.ಜಿ.ಎಸ್ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ರೈತ ಪರಮೇಶ್ವರ ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಾಗ ರೈತನನ್ನು ಠಾಣೆಗೆ ಹಾಕ್ಕೊಂಡು ಹೋಗೋಣ್ವಾ? ಎಂದು ಪೊಲೀಸ್ ಸಿಬ್ಬಂದಿ ಅವಾಜ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಹಾಕ್ಕೊಂಡು ಹೋಗು ಬಾ ಅಂದಿದ್ದಕ್ಕೆ ಕೋಪಗೊಂಡು, ರೈತನ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.