ರೈತರು ಗಮನಿಸಲೇಬೇಕಾದ ವಿಷಯವಿದು! ರಸಗೊಬ್ಬರ ಖರೀದಿ ಸಮಯ ವಿಸ್ತರಿಸಿದ ಸರ್ಕಾರ!

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ರಾಜ್ಯದಲ್ಲಿ ಮುಂಗಾರು ಬಿತ್ತನೆ ಆರಂಭವಾಗಿರುವುದರಿಂದಾಗಿ ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರಸಗೊಬ್ಬರ, ಬಿತ್ತನೆ ಬೀಜ ಖರೀದಿಗೆ ಈಗ ಸಕಾಲವಾಗಿದ್ದರಿಂದಾಗಿ ಸರ್ಕಾರ, ಖರೀದಿ ಸಮಯ ವಿಸ್ತರಿಸಿ ಆದೇಶಿಸಿದೆ.

ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಜೂ. 7ರ ವರೆಗೆ ಜಾರಿಯಲ್ಲಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 10ರ ವರೆಗೆ ಸಮಯ ನಿಗದಿಪಡಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಸಮಯದ ನಿರ್ಬಂಧ ವಿಧಿಸಿಲ್ಲ. ಆದರೂ ಹಲವೆಡೆ ರೈತರು ಮುಗಿಬಿದ್ದು ಬೀಜ ಖರೀದಿ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ಚರ್ಚಿಸಿ ರೈತರಿಗೆ ಅಗತ್ಯ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆ ಖರೀದಿ ಸಮಯವನ್ನು ವಿಸ್ತರಿಸಿದ್ದಾರೆ. ಹೀಗಾಗಿ ಖರೀದಿ ಸಮಯ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಲಾಕ್ ಡೌನ್ ಸಮಯದಲ್ಲಿಯೂ ಕೃಷಿಗಾಗಲಿ, ರೈತಾಪಿ ಚಟುವಟಿಕೆಗಳಿಗಾಗಲಿ ಅಥವಾ ಕೃಷಿ ಯಂತ್ರೋಪಕರಣಗಳ ಖರೀದಿಗಾಗಲಿ ಸರ್ಕಾರ ಯಾವುದೇ ನಿರ್ಬಂಧ ಹೇರಿಲ್ಲ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಅಂದಾಜು 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳಿಗೆ ಬೇಡಿಕೆಯಿದ್ದು, ಕಳೆದ ಮೇ. 28 ರ ವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಇದುವರೆಗೂ 19,675 ಕ್ವಿಂಟಾಲ್ ಗಳಷ್ಟು ಬಿತ್ತನೆ ಬೀಜ ವಿತರಿಸಲಾಗಿದೆ. ಅಲ್ಲದೇ, 1,74,653 ಕ್ವಿಂಟಾಲ್ ಗಳಷ್ಟು ಬೀಜ ಇನ್ನೂ ದಾಸ್ತಾನ ಇದೆ. ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಪೂರೈಸಲಾಗುತ್ತಿದ್ದು, ಬಿತ್ತನೆ ಬೀಜ ಪೂರೈಕೆಗೆ ಯಾವುದೇ ಕೊರತೆ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ.

ಅದರಂತೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 26.47 ಲಕ್ಷ ಮೆಟ್ರಿಕ್ ಟನ್ ವಿವಿಧ ರಾಸಾಯನಿಕ ಗೊಬ್ಬರಗಳಿಗೆ ಬೇಡಿಕೆಯಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 7,97,662 ಮೆಟ್ರಿಕ್ ಟನ್ ರಸಗೊಬ್ಬರಗಳಿಗೆ ಬೇಡಿಕೆಯಿದ್ದು, ಮೇ. 28 ರ ವರೆಗೆ ಒಟ್ಟು 5,67,239 ಮೆಟ್ರಿಕ್ ಟನ್ ಪ್ರಮಾಣದಲ್ಲಿ ರಸಗೊಬ್ಬರ ಸರಬರಾಜಾಗಿದೆ. ಇನ್ನೂ ಒಟ್ಟು 12,38,600 ಮೆಟ್ರಿಕ್ ಟನ್ ಗಳಷ್ಟು ರಸಗೊಬ್ಬರ ದಾಸ್ತಾನು ಇದ್ದು, ಯಾವುದೇ ರಸಗೊಬ್ಬರದ ಕೊರತೆ ಇಲ್ಲ ಎಂದು ಸರ್ಕಾರ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here