13 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಅದಲು ಬದಲು; ಪ್ರಾಮಾಣಿಕತೆ ಮೆರೆದ
ಸಹ ಪ್ರಯಾಣಿಕ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಸುಮಾರು 32 ತೊಲೆಯ ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಸಹ ಪ್ರಯಾಣಿಕರೊಬ್ಬರು ತೆಗೆದುಕೊಂಡು ಕೆಳಗಿದು ಪುನಃ ರೈಲ್ವೆ ಪೊಲೀಸರ ಮೂಲಕ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಅಪರೂಪದ ಘಟನೆ ಶನಿವಾರ ಗದಗ ರೈಲು ನಿಲ್ದಾಣದಲ್ಲಿ ನಡೆಯಿತು.

ವಿಜಯಪುರ ಪಟ್ಟಣದ ಆದರ್ಶ ನಗರದ ನಿವಾಸಿ ಬ್ಯಾಗ್ ವಾರಸುದಾರರಾದ ಚನ್ನಬಸಪ್ಪ ಶಿವಪ್ಪ ಇಂಡಿ ಅವರಿಗೆ ಸುಮಾರು 13 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಹಸ್ತಾಂತರಿಸಲಾಯಿತು.

ಚನ್ನಬಸಪ್ಪ ಹಾಗೂ ಅವರ ಧರ್ಮಪತ್ನಿ ಮೊಮ್ಮಗನ ನಾಮಕರಣ ಕಾರ್ಯಕ್ರಮಕ್ಕೆ ಗದಗ-ಮುಂಬೈ ರೈಲಿನಲ್ಲಿ ಹೊರಟಿದ್ದರು. ಈ ವೇಳೆ ಅಷ್ಟೊಂದು ಚಿನ್ನಾಭರಣವನ್ನು ಮನೆಯಲ್ಲಿ ಇಟ್ಟು ಊರಿಗೆ ಹೋಗುವುದು ಸರಿಯಲ್ಲವೆಂದು ಬ್ಯಾಗ್ ನಲ್ಲಿ ಹಾಕಿಕೊಂಡು ಬಂದಿದ್ದರು. ಈ ವೇಳೆ ಗದಗ ರೈಲು ನಿಲ್ದಾಣದಲ್ಲಿ ಬ್ಯಾಗ್ ಬದಲಾಗಿದೆ.

ಅದೇ ರೈಲು ಮೂಲಕ ಗದಗ ನಗರದ ಮೆಹಬೂಬ್ ಸಾಬ ಕರ್ನಾಚಿ ಹಾಗೂ ಅವರ ಕುಟುಂಬದವರು ಮಧ್ಯಾಹ್ನ ಗದಗ ರೈಲು ನಿಲ್ದಾಣದಿಂದ ಮುಂಬೈಗೆ ತೆರಳುತ್ತಿದ್ದರು. ರೈಲು ಹತ್ತಿದ ಬಳಿಕ ಮೆಹಬೂಬ್ ಸಾಬ ಅವರು ಟಿಕೆಟ್ ಪರಿಶೀಲಿಸಿದ್ದಾರೆ. ಈ ವೇಳೆ ರೈಲು ಟಿಕೆಟ್ ನಲ್ಲಿ ಮೂರನೇ ತಿಂಗಳು ನಮುದಿಸುವ ಬದಲು ಆರನೇ ತಿಂಗಳೆಂದು ನಮೂದಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹತ್ತಿದ ರೈಲಿನಿಂದ ಕೆಳಗಿಳಿದು ಬಂದು ರೈಲು ಟಿಕೆಟ್ ಕೌಂಟರ್ ನಲ್ಲಿ ವಿಚಾರಿಸಿದ್ದಾನೆ. ತಿಂಗಳು ತಪ್ಪಾಗಿ ನಮೂದಾಗಿರುವುದರಿಂದ ತನ್ನೊಡನೆ ಮುಂಬೈಗೆ ಪ್ರಯಾಣಿಸುತ್ತಿದ್ದ ಕುಟುಂಬಸ್ಥರನ್ನು ಕೆಳಗಿಳಿಯುವಂತೆ ಹೇಳಿದ್ದಾನೆ. ಈ ವೇಳೆ ಮೆಹಬೂಬ್ ಅವರ ಮಗನೊಬ್ಬ ತಮ್ಮ ಬ್ಯಾಗೆಂದು ತಿಳಿದು ಬೇರೆಯವರ ಬ್ಯಾಗ್ ನ್ನು ತೆಗೆದುಕೊಂಡು ರೈಲು ಇಳಿದಿದ್ದಾನೆ.

ಮಗನ ಕೈಯಲ್ಲಿದ್ದ ಬ್ಯಾಗನ್ನು ಗಮನಿಸಿದ ಮೆಹಬೂಬ್ ಇದು ನಮ್ಮ ಬ್ಯಾಗ್ ಅಲ್ಲ ಅಲ್ವಾ. ಇದನ್ನ್ಯಾಕೆ ತಂದಿದ್ದೀಯಾ ಎಂದು ಪ್ರಶ್ನಿಸಿ ಬ್ಯಾಗ್ ತಗೆದು ನೋಡಿದಾಗ ಅದರಲ್ಲಿ ಅಪಾರ ಪ್ರಮಾಣದ ಚಿನ್ನಾಭರಣವಿರುವುದನ್ನು ನೋಡಿ ರೈಲ್ವೆ ಪೊಲೀಸರಿಗೆ ತಿಳಿಸಿ, ನಡೆದ ಘಟನೆಯನ್ನು ವಿವರಿಸಿದ್ದಾರೆ.
ಆದರೆ, ಅಷ್ಟೊತ್ತಿಗಾಗಲೇ ರೈಲು ಕೂಡಾ ಹೊರಟು ಹೋಗಿತ್ತು.

ವಿಷಯ ತಿಳಿದು ಸಿಪಿಐ ಡಿ.ಬಿ.ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಎಎಸ್ ಐ ಪರಶರಾಮ ಹಲಗಿ ಅವರ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಬ್ಯಾಗ್ ನ ವಾರಸುದಾರರನ್ನು ಪತ್ತೆ ಹಚ್ಚಿ ಚಿನ್ನಾಭರಣವನ್ನು ಹಸ್ತಾಂತರಿಸಿದರು. ಇನ್ನು ಪ್ರಾಮಾಣಿಕತೆ ಮರೆದ ಸಹ ಪ್ರಯಾಣಿಕ ಮೆಹಬೂಬ್ ಹಾಗೂ ರೈಲ್ವೆ ಪೊಲೀಸರ ಕಾರ್ಯಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಪರುಶರಾಮ ಕೆ., ಅನಿಲ್ ಗೌಡ ಮೂಲಿಮನಿ, ಈರಪ್ಪ ತಳವಾರ, ಸಿದ್ದಪ್ಪ ನಾವಳ್ಳಿ, ಶಿವರಡ್ಡಿ ಮೊರಬ್, ಅನ್ವರ್ ಬಾಷಾ, ವೆಂಕಟೇಶ ಕಡಕೋಳ, ಪರಶುರಾಮ ಹಳ್ಳಿಕೇರಿ, ಹರ್ಷಾ ಹಳ್ಳಿ, ಶಿವಾನಂದ ಹಿರೇಮಠ ಇನ್ನಿತರರು ಇದ್ದರು.


Spread the love

LEAVE A REPLY

Please enter your comment!
Please enter your name here