ವಿಜಯಸಾಕ್ಷಿ ಸುದ್ದಿ, ಗದಗ
ಹಾವಿನ ದ್ವೇಷ 12 ವರ್ಷ…. ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮನುಷ್ಯ ಅನ್ನೋ ವಿಷ ಜಂತುವಿನ ದ್ವೇಷ ನೂರು ವರ್ಷ ಇರುತ್ತೆ. ಅದು ಯಾವಾಗಲಾದರೂ ಬುಗಿಲೆಳಬಹುದು. ಹೌದು ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ನಡೆದ ಅಮಾನವೀಯ ಘಟನೆ ಇದಕ್ಕೆ ಸಾಕ್ಷಿ ಎಂಬಂತಾಗಿದೆ.
28 ವರ್ಷಗಳ ಹಿಂದೆ ಮೇಲ್ಜಾತಿಯ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದ ತಪ್ಪಿಗೆ ದಲಿತ ಮಹಿಳೆಯನ್ನು, ಪತಿಯ ಸಂಬಂಧಿಕರು, ಕ್ಷುಲ್ಲಕ ನೆಪದಲ್ಲಿ ಅರೆಬತ್ತಲೆಂತಹ ಶಿಕ್ಷೆ ನೀಡಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆ ಹಾಗೂ ಅದೇ ಗ್ರಾಮದ ಈರನಗೌಡ ಕುಲಕರ್ಣಿ ಎಂಬುವವರು ಪ್ರೀತಿಸಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಈ ಮದುವೆಗೆ ಕುಲಕರ್ಣಿ ಕುಟುಂಬದ ಸಂಬಂಧಿಕರಿಂದ ವಿರೋಧ ಇತ್ತು. ಅಂದಿನಿಂದ ಇಂದಿನವರೆಗೆ ದ್ವೇಷ ಸಾಧಿಸಲಾಗುತ್ತಿತ್ತು.
ಮೊನ್ನೆ ಜುಲೈ 8 ರ ಗುರುವಾರದಂದು ಸಂಜೆ ಈರನಗೌಡ ಹಾಗೂ ಪತ್ನಿ ವಾಸವಿರುವ ಮನೆಯ ಮುಂದೆ ಆಗಮಿಸಿದ
ಬಸನಗೌಡ ಕುಲಕರ್ಣಿ ಎಂಬ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ ಎಂಬ ಆರೋಪದ ಹಿನ್ನೆಲೆಯಲ್ಲಿ ಹೊತ್ತಿದ ಜಗಳ ಈಗ ಪೊಲೀಸ್ ಠಾಣೆಯ ಮೆಟ್ಟಲು ಏರಿದೆ.
ಬಸನಗೌಡ ಕುಲಕರ್ಣಿ, ಮಲ್ಲನಗೌಡ ಕುಲಕರ್ಣಿ ಹಾಗೂ ಕುಮಾರ್ ಗೌಡ ಕುಲಕರ್ಣಿ ಮತ್ತು ಸಂಬಂಧಿಕರು ಸೇರಿ ಈರನಗೌಡ ಕುಲಕರ್ಣಿ ಹಾಗೂ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ ಈರನಗೌಡನ ಪತ್ನಿಯನ್ನು ಅರೆಬತ್ತಲೆ ಮಾಡಿ ಅಮಾನವೀಯವಾಗಿ ನಡೆದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಡಲಿ ಕಾವಿನಿಂದ ಹಲ್ಲೆ ಮಾಡಿದ್ದಾರೆ.
ಇದನ್ನು ಬಿಡಿಸಲು ಬಂದ ಪತಿ ಈರನಗೌಡ, ಮಗ ಹನಮಂತಗೌಡನ ಮೇಲೂ ಬಸನಗೌಡ ಕುಲಕರ್ಣಿ ಹಾಗೂ ಸಂಬಂಧಿಕರು ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.