ವಿಜಯಸಾಕ್ಷಿ ಸುದ್ದಿ, ರೋಣ
ಒಂದೇ ನಾಣ್ಯದ ಎರಡು ಮುಖಗಳಂತಿರುವ ಕಂದಾಯ ಮತ್ತು ಪೊಲೀಸ್ ಇಲಾಖೆಗಳು ಸೋಮವಾರ ರಾತ್ರಿ ನಡೆದ ಅವಮಾನವೀಯ ಘಟನೆಯಿಂದ ಮಂಗಳವಾರ ಬೆಳಕಾಗುವುದರಲ್ಲಿ ಹಾವು ಮುಂಗಿಸಿಯಂತಾಗಿವೆ.
ರೋಣ ಪಟ್ಟಣದಲ್ಲಿ ಸೋಮವಾರ ರಾತ್ರಿ ೮ ಘಂಟೆ ಸುಮಾರಿಗೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಾದ ಎಸ್.ಪಿ. ರಾಮಣ್ಣವರ ಹಾಗೂ ಬಿ.ಕೆ. ಮಾದರ ಎಂಬುವರು ಊಟ ತರಲು ಬಸ್ ನಿಲ್ದಾಣದ ಬಳಿಯಿರುವ ಹೋಟೆಲ್‌ಗೆ ತೆರಳಿದ್ದರು. ಆಗ ಪೊಲೀಸರು ಏಕಾಏಕಿ ಗ್ರಾಮ ಲೆಕ್ಕಾಧಿಕಾರಿಗಳ ಮೆಲೆ ನುಗ್ಗಿ, ಮನಸೋ ಇಚ್ಛೆ ಥಳಿಸಿದ್ದಾರೆ. ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಬಾಸುಂಡೆಗಳೆದ್ದಿವೆ.
ಈ ಘಟನೆಯಿಂದ ಕಂದಾಯ ಇಲಾಖೆಯ ಸಿಬ್ಬಂದಿ ರೊಚ್ಚಿಗೆದ್ದಿದ್ದು, ಮಂಗಳವಾರ ಪ್ರತಿಭಟನೆಗೆ ಕಾರಣವಾಯಿತು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಮೇಲಧಿಕಾರಿಗಳ ಆದೇಶವನ್ನು ಪಾಲಿಸಬೇಕು ಮತ್ತು ಕೊವಿಡ್ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಯ ಕರ್ತವ್ಯವನ್ನು ನಿಭಾಯಿಸಬೇಕು ಎಂಬ ದೃಷ್ಟಿಯಿಂದ ದಿನದ ೨೪ ಘಂಟಗಳ ಕಾಲ ಕೆಲಸ ಮಾಡುತ್ತಿದ್ದೇವೆ. ಆದರೆ, ರಾತ್ರಿ ಊಟ ತರುವ ವೇಳೆಯಲ್ಲಿ ಪೊಲೀಸರು ಹಲ್ಲೆ ಮಾಡಿದ್ದು ಅಕ್ಷ್ಯಮ್ಯ ಅಪರಾಧವಾಗಿದ್ದು, ಕೂಡಲೆ ಅವರನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನಾ ನಿರತಗ್ರಾಮ ಲೆಕ್ಕಾಧಿಕಾರಿಗಳು ಆಗ್ರಹಿಸಿದರು.
ಸಂಧಾನ ವಿಫಲ…
ಗ್ರಾಮ ಲೆಕ್ಕಾಧಿಕಾರಿಗಳ ಪ್ರತಿಭಟನೆಯ ತಿಳಿದ ತಹಸೀಲ್ದಾರ ಜೆ.ಬಿ. ಜಕ್ಕಣಗೌಡ್ರ ಹಾಗೂ ಪೊಲೀಸ್ ಅಧಿಕಾರಿಗಳು ಸಂಧಾನ ಸಭೆಯನ್ನು ನಡೆಸಿದರೂ ಸಭೆ ವಿಫಲವಾಯಿತು. ಇಲಾಖೆ ವಹಿಸಿದ ಕಾರ್ಯಗಳನ್ನು ನಿಭಾಯಿಸಲು ಗ್ರಾಮ ಲೆಕ್ಕಾಧಿಕಾರಿಗಳು ಮಧ್ಯರಾತ್ರಿಯೂ ತೆರಳಬೇಕಾಗುತ್ತದೆ. ಇಂತಹ ಸಂಧರ್ಭದಲ್ಲಿ ನಮಗೆ ತೊಂದರೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಸಿಬ್ಬಂದಿ ಮೆಲೆ ಮಾರಣಾಂತಿಕ ಹಲ್ಲೆ ಮಾಡಿರುವ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಸುದ್ದಿಗೋಷ್ಠಿ
ಘಟನೆ ಕುರಿತು ಕಾರ್ಯಲಯದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಹಸೀಲ್ದಾರ ಜೆ.ಬಿ. ಜಕ್ಕಣಗೌಡ್ರ, ಪೊಲೀಸರಿಗೆ ಹೊಡೆಯುವ ಹಕ್ಕನ್ನು ಯಾರೂ ಕೊಟ್ಟಿಲ್ಲ. ಇಲಾಖೆಯ ಸಿಬ್ಬಂದಿ ಮೇಲೆ ಪೊಲೀಸರು ಹಲ್ಲೆ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಘಟನೆಗೆ ಕಾರಣರಾದ ಪೊಲೀಸರ ಮೇಲೆ ಸಿಪಿಐ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದು, ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸುವ ಮೂಲಕ ಲಿಖಿತವಾಗಿಯೂ ಪತ್ರ ರವಾನಿಸಲಾಗುವುದು. ಸಂಧಾನ ಸಭೆ ನಡೆಸಿಲ್ಲ. ಬದಲಾಗಿ ಘಟನೆಯ ವಿವರವನ್ನು ನಾನು ಮತ್ತು ಪೊಲೀಸ್ ಅಧಿಕಾರಿಗಳು ಪಡೆದುಕೊಂಡಿದ್ದೇವೆ ಎಂದರು.
ನ್ಯಾಯ ಸಿಗಬೇಕು
ಸೋಮವಾರ ರಾತ್ರಿ ೮ ಗಂಟೆ ಸುಮಾರಿಗೆ ಕಚೇರಿಯಿಂದ ಪಾರ್ಸೆಲ್ ಊಟ ತರಲು ಬಸ್ ನಿಲ್ದಾಣದ ಬಳಿಯಿರುವ ಹೋಟೆಲ್‌ಗೆ ಹೋದ ಸಂದರ್ಭದಲ್ಲಿ ಪೊಲೀಸರು ಏಕಾಏಕಿ ನಮ್ಮನ್ನು ಮನಸೋ ಇಚ್ಛೆ ಥಳಿಸಿದರು. ನಾವು ಗ್ರಾಮ ಲೆಕ್ಕಾಧಿಕಾರಿಗಳು ಎಂದು ಗುರುತಿನ ಚೀಟಿ ತೋರಿಸಿದರೂ ರಕ್ತ ಮಂಜುಗಟ್ಟುವಂತೆ ಬಡಿದಿದ್ದಾರೆ. ನಮಗೆ ನ್ಯಾಯ ಸಿಗಬೇಕು ಎಂದು ಹಲ್ಲೆಗೊಳಗಾದ ಗ್ರಾಮ ಲೆಕ್ಕಾಧಿಕಾರಿಗಳಾದ ಎಸ್.ಪಿ. ರಾಮಣ್ಣವರ ಹಾಗೂ ಬಿ.ಕೆ. ಕಮ್ಮಾರ ಆಗ್ರಹಿಸಿದರು.