ವಿಜಯಸಾಕ್ಷಿ ಸುದ್ದಿ, ಗದಗ
ಬಿಲ್ ಹಣ ಪಾವತಿಸಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಕಳೆದ 24 ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಟ್ಟ ನಗರಾಭಿವೃದ್ಧಿ ಕೋಶದ ಕಾರ್ಯ ಪಾಲಕ ಇಂಜಿನಿಯರ್ ಅವರನ್ನು ಕೊನೆಗೂ ಎಸಿಬಿ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಈ ಕುರಿತು ಎಸಿಬಿ ಎಸ್ಪಿ ನ್ಯಾಮಗೌಡ ವಿಜಯಸಾಕ್ಷಿಗೆ ಮಾಹಿತಿ ನೀಡಿದ್ದಾರೆ.
ಹಳೆಯ ಘನತ್ಯಾಜ್ಯ ವಿಲೇವಾರಿ ಘಟಕದಿಂದ ಹೊಸ ಘಟಕಕ್ಕೆ ಮಣ್ಣು ಸಾಗಾಟ ಮಾಡಿದ ಬಿಲ್ ಪಾಸ್ ಮಾಡಲು ನಗರಸಭೆ ಎಇಇ ವರ್ಧಮಾನ್ ಹುದ್ದಾರ್, ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಹಾಗೂ ನಗರಾಭಿವೃದ್ಧಿ ಕೋಶದ ಕಾರ್ಯ ಪಾಲಕ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಲಂಚದ ಬೇಡಿಕೆ ಇಟ್ಟಿದ್ದರು.
ಅನಿಲಕುಮಾರ್ ಮುದ್ದಾ ಜುಲೈ 5ರಂದು 5,000 ರೂ. ಹಣ ಪಡೆದಿದ್ದರು. ನಗರಸಭೆ ಆಯುಕ್ತ ರಮೇಶ್ ಜಾಧವ್ ಕೂಡ 1.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಾಗೆಯೇ ನಗರಸಭೆಯ ಎಇಇ ವರ್ಧಮಾನ್ ಹುದ್ದಾರ್ 40 ಸಾವಿರ ಹಣ ಕೇಳಿದ್ದರು ಎಂದು ಹೇಳಲಾಗುತ್ತದೆ. ಇದರಿಂದ ನೊಂದ ಗುತ್ತಿಗೆದಾರ ಅಬ್ದುಲ್ ಸಲಾಮ್ ಮನಿಯಾರ್ ಎಸಿಬಿಗೆ ದೂರು ನೀಡಿದ್ದರು.
ಆ ಪ್ರಕಾರ ಬುಧವಾರ ಸಂಜೆ 25 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಎಇಇ ಹುದ್ದಾರ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು.
ಹುದ್ದಾರ್ ಅವರ ಬಂಧನದ ಅನಂತರ ನಗರಸಭೆ ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಹಾಗೂ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಅವರನ್ನು ಎಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ಮಧ್ಯರಾತ್ರಿ ಮನೆಗೆ ಕಳಿಸಿದ್ದ ಅಧಿಕಾರಿಗಳು ಮತ್ತೆ ಗುರುವಾರ ಮುಂಜಾನೆಯಿಂದ ಧ್ವನಿ ಪರೀಕ್ಷೆ ಸೇರಿದಂತೆ ಅನೇಕ ಸಾಕ್ಷಿಗಳನ್ನು ಎಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದರು.
ರಾಜಕೀಯ ಒತ್ತಡ?
ಬುಧವಾರ ರಾತ್ರಿ, ಗುರುವಾರ ಇಡೀ ದಿನ ಆಯುಕ್ತ ರಮೇಶ್ ಜಾಧವ್ ಹಾಗೂ ಅನಿಲಕುಮಾರ್ ಮುದ್ದಾ ಅವರನ್ನು ನಡೆಸುತ್ತಿರುವ ವಿಚಾರಣೆಯ ವೇಗ ಹಾಗೂ ರೀತಿಯ ಕುರಿತು ಗದಗ -ಬೆಟಗೇರಿ ಅವಳಿ ನಗರದಲ್ಲಿ ಊಹಾಪೋಹಗಳು ಎದ್ದಿದ್ದವು. ರಾಜಕೀಯ ಒತ್ತಡದ ಮಾತು ಕೇಳಿ ಬಂದಿತ್ತು. ಇ ಕುರಿತು ವಿಜಯಸಾಕ್ಷಿ ಎಸಿಬಿ ಡಿವೈಎಸ್ಪಿ ವೇಣುಗೋಪಾಲ ಅವರನ್ನು ಸಂಪರ್ಕಿಸಿದಾಗ, ಅಂತಹ ಯಾವುದೇ ಒತ್ತಡ ಬಂದಿಲ್ಲ. ಯಾವ ಒತ್ತಡಕ್ಕೂ ಮಣಿಯಲ್ಲ ಅಂತ ಸ್ಪಷ್ಟಪಡಿಸಿದರು. ತನಿಖೆ ನಡೆಯುತ್ತಿದೆ. ಸಾಕ್ಷಿ ಮತ್ತು ಧ್ವನಿ ಮುದ್ರಿಕೆ ಪರಿಶೀಲನೆ ನಡೆಯುತ್ತಿದೆ. ಸರಿಯಾದ ದಾಖಲೆ ಸಿಕ್ಕರೆ ಆಯುಕ್ತರನ್ನೂ ಬಂಧಿಸಲಾಗುವುದು ಎಂದು ಹೇಳಿದ್ದರು. ಎಸ್ಪಿ ಎಸ್ಪಿ ನ್ಯಾಮಗೌಡ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.