ಮುಂಡರಗಿ ಪೊಲೀಸರಿಗೆ ಕಾಣಿಸದ್ದು; ಕೊಟ್ಟೂರ ಪೊಲೀಸರಿಗೆ ಕಾಣಿಸಿತು!
ವಿಜಯಸಾಕ್ಷಿ ಸುದ್ದಿ, ಗದಗ/ಕೊಟ್ಟೂರು:
ಗದಗ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಗೆ ಕನ್ನ ಹಾಕುತ್ತಿರುವುದು ಹೊಸತೇನಲ್ಲ. ನಿತ್ಯ ಜನರಿಂದ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಖರೀದಿಸಿ ಬೇರೆಡೆ ಸಾಗಿಸುತ್ತಿದ್ದಾರೆ. ಇದು ಆಹಾರ ಮತ್ತು ಪೊಲೀಸ್ ಇಲಾಖೆಗೆ ಚೆನ್ನಾಗಿಯೇ ಗೊತ್ತಿದೆ. ಆದರೂ, ಅಕ್ಕಿ ದಂಧೆಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ.
ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುವ ವಾಹನಗಳು ರಾಜಾರೋಷವಾಗಿ ಸಂಚರಿಸುತ್ತಿದ್ದು, ಗದಗ ಜಿಲ್ಲಾ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಅದರಲ್ಲೂ ಜಿಲ್ಲೆಯ ಮುಂಡರಗಿ ಪೊಲೀಸರ ಕಾರ್ಯವೈಖರಿ ಎದ್ದು ಕಾಣುತ್ತದೆ.
ಹೌದು, ಅಕ್ರಮವಾಗಿ ಪಡಿತರ ಅಕ್ಕಿ ದಂಧೆ ನಡೆಸುತ್ತಿದ್ದ ಗದಗ ಜಿಲ್ಲೆಯ ಅಕ್ಕಿ ದಂಧೆಕೋರನಿಗೆ, ವಿಜಯನಗರ ಜಿಲ್ಲೆಯ ಕೊಟ್ಟೂರ ಪೊಲೀಸರು ಹೆಡಿಮುರಿ ಕಟ್ಟಿದ್ದಾರೆ. ಕಾಳಸಂತೆಯಲ್ಲಿ ಪಡಿತರ ಅಕ್ಕಿ ಖರೀದಿಸಿ ಅದನ್ನು ಬೇರೆ ಜಿಲ್ಲೆಗೆ ಸಾಗಿಸುತ್ತಿದ್ದ ಮುಂಡರಗಿಯ ಮೈಲಾರಲಿಂಗೇಶ್ವರ ಟ್ರೇಡರ್‌ನ ಮಾಲೀಕ ವೀರೇಶ್ ಬಡಿಗೇರ ಎಂಬುವವನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಹಲವು ವರ್ಷಗಳಿಂದ ಅಕ್ಕಿ ದಂಧೆ ಮಾಡುತ್ತಾ ಬಂದಿರುವ ವಿರೇಶ್ ಮುಂಡರಗಿಯಿಂದ ಮಂಡ್ಯ ಜಿಲ್ಲೆಯ ಹುಲಿವಾಹನ ಗ್ರಾಮಕ್ಕೆ ಅಕ್ಕಿ ಸರಬರಾಜು ಮಾಡುತ್ತಿದ್ದ ಗೂಡ್ಸ್ ವಾಹನದ ಮೇಲೆ ದಾಳಿ ನಡೆಸಿರುವ ಕೊಟ್ಟೂರ ಪೊಲೀಸರು, ಪಟ್ಟಣದ ಹೊರವಲಯದ ಇಟ್ಟಿಗಿ ರಸ್ತೆಯಲ್ಲಿ ವೀರೇಶ್ ಬಡಿಗೇರನಿಗೆ ಸೇರಿರುವ ಒಟ್ಟು 5,15,160 ರೂ. ಮೌಲ್ಯದ 50 ಕೆ.ಜಿ.ಯ ಒಟ್ಟು 360 ಮೂಟೆಗಳನ್ನು ಜಪ್ತಿ ಮಾಡಿದ್ದಾರೆ. ಚಾಲಕ ಪಾಲಾಕ್ಷ್ ಎಂಬಾತನನ್ನು ಬಂಧಿಸಲಾಗಿದೆ.
ಈ ಹಿಂದೆಯೂ ವೀರೇಶ್ ಬಡಿಗೇರನಿಗೆ ಸೇರಿದ್ದು ಎನ್ನಲಾದ ಅನ್ನಭಾಗ್ಯ ಅಕ್ಕಿ ತುಂಬಿದ ಲಾರಿಯೊಂದು ಮುಂಡರಗಿ-ಮುರ್ಲಾಪುರ ರಸ್ತೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಮಾಹಿತಿದಾರರು ನೀಡಿದ ಮಾಹಿತಿ ಮೇರೆಗೆ ಮುಂಡರಗಿ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ದಾಖಲೆಗಳ ಪ್ರಕಾರ ವೀರೇಶ್ ಮುಂಡರಗಿಯಿಂದ ಮಂಡ್ಯದ ಹುಲಿವಾಹನ ಗ್ರಾಮಕ್ಕೆ ಅಕ್ಕಿ ಸರಬರಾಜು ಮಾಡುತ್ತಿದ್ದ ಎಂದು ಗೊತ್ತಾಗಿದೆ. ಆದರೆ, ಮುಂಡರಗಿ ಪೊಲೀಸರಿಗೆ ಕಾಣಿಸದ ಅಕ್ಕಿ ಸಾಗಾಟ ವಾಹನ, ವಿಜಯನಗರ ಜಿಲ್ಲೆಯ ಕೊಟ್ಟೂರ ಪೊಲೀಸರಿಗೆ ಕಾಣಿಸಿದ್ದು ಹೇಗೆ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಇನ್ನು ಅಷ್ಟೊಂದು ಪ್ರಮಾಣದ ಪಡಿತರ ಅಕ್ಕಿ ತುಂಬಿಕೊಂಡ ಗೂಡ್ಸ್ ವಾಹನ ಮುಂಡರಗಿ ಪಟ್ಟಣದಿಂದ ಹೊರ ಹೋಗಿದ್ದು ಹೇಗೆ? ಇದು ಪೊಲೀಸ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿರಲಿಲ್ಲವೇ? ಅಥವಾ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸಿದ್ದು ಏಕೆ? ಎಂಬ ಸಂಶಯ ಜಿಲ್ಲೆಯ ಜನರಲ್ಲಿ ವ್ಯಕ್ತವಾಗುತ್ತದೆ.