ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಪಟ್ಟಣದ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಪ್ರಕರಣಗಳ ಜಾಡು ಹಿಡಿದು ಕಳ್ಳರ ಪತ್ತೆಗೆ ಜಾಲಬೀಸಿದ ಪೊಲೀಸರು ಗುರುವಾರ ಓರ್ವ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜು. 20 ಮತ್ತು ಜು. 25ರಂದು ಲಕ್ಷ್ಮೇಶ್ವರ ಪಟ್ಟಣದ ಹೊರವಲಯದ ರಂಭಾಪುರಿ ನಗರ ಮತ್ತು ಕೆಂಪಿಗೆರೆ ಪ್ರದೇಶದಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಜುಲೈ 20ರಂದು ರಾತ್ರಿ ಲಕ್ಷ್ಮೇಶ್ವರದ ರಂಭಾಪುರಿ ನಗರದ ಸುಲೇಮಾನ್ ಭಾಷಾಸಾಬ ಗತ್ತರಗಿ ಎಂಬುವವರ ಮನೆಯ ಬೀಗ ಮುರಿದು ಟ್ರಜರಿಯಲ್ಲಿಟ್ಟಿದ್ದ 15 ತೊಲ ಚಿನ್ನಾಭರಣ ಹಾಗೂ 25 ಸಾವಿರ ನಗದು ದೋಚಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ ಜುಲೈ 25 ಹಾಗೂ 26ರ ನಡುವೆ ಲಕ್ಷ್ಮೇಶ್ವರದ ಕೆಂಪಗೇರಿಯ ನಿಂಗಪ್ಪ ಗೌಡನಾಯ್ಕರ ಅವರ ಮನೆಯ ಬೀಗ ಮುರಿದು 8 ಗ್ರಾಂ ತೂಕದ ಚಿನ್ನದ ಜುಮಕಿ ಬೊಂಡೋಲೆ ಹಾಗೂ 25 ಸಾವಿರ ನಗದು ದೋಚಲಾಗಿತ್ತು.
ಈ ಎರಡು ಪ್ರತ್ಯೇಕ ಪ್ರಕರಣಗಳು ಲಕ್ಷ್ಮೇಶ್ವರ ಠಾಣೆಯಲ್ಲಿ ದಾಖಲಾಗಿದ್ದವು.
ಪ್ರಕರಣದ ಜಾಡು ಹಿಡಿದ ಪಿಎಸ್‌ಐ ಪ್ರಕಾಶ ಡಿ. ನೇತೃತ್ವದ ಪೊಲೀಸ್ ತಂಡ, ಎಸ್‌ಪಿ ಯತೀಶ್ ಎನ್, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಸಿಪಿಐ ವಿಕಾಸ್ ಲಮಾಣಿ ಮಾರ್ಗದರ್ಶನದಲ್ಲಿ ಹಗಲೂ ರಾತ್ರಿ ಕಳ್ಳರ ಪತ್ತೆ ಕಾರ್ಯದಲ್ಲಿ ತೊಡಗಿತ್ತು.
ಕಳ್ಳತನ ಬಳಿಕ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಆರೋಪಿ ಅಶೋಕ ಅಲಿಯಾಸ್ ಶ್ರೀನಿವಾಸ/ಸೀನ ತಂದೆ ರಾಜು ಕಾಂಚಿಬೋಸಲೆ (25) ಎಂಬಾತನನ್ನು ಸೆ. 9ರಂದು ಬೆಳಗಿನ ಜಾವ ಹೊಸ ಬಸ್ ನಿಲ್ದಾಣದ ಬಳಿ ಬಂಧಿಸಿ, ಸತ್ಯ ಬಾಯಿ ಬಿಡಿಸಿದ್ದಾರೆ.
ಬಂಧಿತರಿಂದ 1.50 ಲಕ್ಷ ರೂ ಮೌಲ್ಯದ 33 ಗ್ರಾಂ ಬಂಗಾರದ ಆಭರಣಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳೂ ಇಬ್ಬರು ಮನೆಗಳ್ಳರನ್ನು ಆಭರಣ ಸಮೇತ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.
ಎಎಸ್‌ಐಗಳಾದ ವೈ.ಎಸ್. ಕೂಬಿಹಾಳ, ಎಸ್. ಎಚ್. ಬೆಟಗೇರಿ, ಸಿಬ್ಬಂದಿ ಜಿ.ಎಂ. ಬೂದಿಹಾಳ, ಎ.ಪಿ. ದೊಡ್ಡಮನಿ, ಎಂ.ಡಿ. ಲಮಾಣಿ, ಎಂ.ಬಿ. ವಡ್ಡಟ್ಟಿ, ಎನ್.ಡಿ. ಹುಬ್ಬಳ್ಳಿ, ಎಂ.ಎಸ್. ಬಳ್ಳಾರಿ, ಎಸ್.ಎಫ್. ತಡಸಿ, ಆರ್.ಎಚ್. ಮುಲ್ಲಾ, ಎನ್.ಎಚ್. ಮಠಪತಿ, ರಾಮು ನಾಯಕ, ಕೆ.ಬಿ. ಹುಲಗೂರ ಅವರನ್ನೊಳಗೊಂಡ ತಂಡ ಕಳ್ಳರ ಪತ್ತೆಯಲ್ಲಿ ಯಶಸ್ವಿಯಾಗಿದೆ.