ವಿಜಯಸಾಕ್ಷಿ ಸುದ್ದಿ, ಪಟ್ನಾ
ಲಸಿಕೆ ಹಾಕಿಸಿಕೊಳ್ಳಲು ಬಂದ ವ್ಯಕ್ತಿಗೆ ನಕಲಿ ಚುಚ್ಚುಮದ್ದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಭಾರತ ಸರ್ಕಾರವು ದೇಶದ ಎಲ್ಲ ಜನರಿಗೂ ಲಸಿಕೆ ನೀಡಬೇಕು ಎಂಬ ನಿಟ್ಟಿನಲ್ಲಿ ಅಭಿಯಾನ ಪ್ರಾರಂಭಿಸಿದೆ. ಆದರೆ, ಹಲವೆಡೆ ನಕಲಿ ಲಸಿಕೆ ನೀಡಲಾಗುತ್ತಿದ್ದರೆ, ಇಲ್ಲೊಂದು ಕಡೆ ಲಸಿಕೆ ಪಡೆಯಲು ಬಂದಿದ್ದ ವ್ಯಕ್ತಿಗೆ ನರ್ಸ್ ವೊಬ್ಬರು ಖಾಲಿ ಸಿರಿಂಜ್ ತೆರೆದು, ಕೊರೊನಾ ಲಸಿಕೆಯ ಸೀಸೆಯಿಂದ ವ್ಯಾಕ್ಸಿನ್ ಭರ್ತಿ ಮಾಡಿಕೊಳ್ಳದೆ ನೇರವಾಗಿ ಖಾಲಿ ಸಿರಿಂಜ್ ಅನ್ನು ಯುವಕನಿಗೆ ಚುಚ್ಚಿದ್ದಾರೆ.
ಆ ಯುವಕನೊಂದಿಗೆ ಬಂದಿದ್ದ ಗೆಳೆಯ, ಇದನ್ನೆಲ್ಲಾ ತಮಾಷೆಗಾಗಿ ವೀಡಿಯೋ ಮಾಡಿಕೊಂಡಿದ್ದನು. ಆದರೆ ಮನೆಗೆ ಮರಳಿದ ಬಳಿಕ ಆ ವೀಡಿಯೋವನ್ನು ಪರಿಶೀಲಿಸಿದಾಗ, ಖಾಲಿ ಸಿರಿಂಜ್ ಚುಚ್ಚಿ ಕಳುಹಿಸಿದ್ದು ಗೊತ್ತಾಗಿದೆ. ತಕ್ಷಣ ಆ ಯುವಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಬಿಹಾರದಲ್ಲಿ ನರ್ಸ್ ವೊಬ್ಬರು ಖಾಲಿ ಸಿರಿಂಜ್ ಅನ್ನು ಲಸಿಕೆ ಪಡೆಯಲು ಬಂದ ವ್ಯಕ್ತಿಗೆ ಚುಚ್ಚಿ ಕಳುಹಿಸಿದ ವೀಡಿಯೋ ವೈರಲ್ ಆಗಿದೆ. ಲಸಿಕೆ ನೀಡಲು ಕುಳಿತಿದ್ದ ನರ್ಸ್ ವೊಬ್ಬರು, ಸುತ್ತಲಿದ್ದವರ ಜತೆ ಮಾತನಾಡುತ್ತ ಸಿರಿಂಜ್ ಪ್ಯಾಕೆಟ್ ಒಡೆದು, ಲಸಿಕೆಯಿಲ್ಲದೆ ಚುಚ್ಚಿದ್ದಾರೆ.