ವಿಜಯಸಾಕ್ಷಿ ಸುದ್ದಿ, ಚೆನ್ನೈ
ಒಂದೆಡೆ ಕೊರೊನಾ ಲಸಿಕೆಗೆ ಅಭಾವ ಸೃಷ್ಟಿಯಾಗುತ್ತಿದ್ದರೂ ಇನ್ನೊಂದೆಡೆ ಲಸಿಕೆ ಹಾಕಿಸಿಕೊಳ್ಳಲು ಜನರು ಭಯ ಪಡುತ್ತಿದ್ದಾರೆ. ಈ ಮಧ್ಯೆ ತಮಿಳುನಾಡಿನಲ್ಲಿ ಲಸಿಕಾ ಅಭಿಯಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಡುಗೊರೆಗಳನ್ನು ನೀಡಲಾಗುತ್ತಿದೆ. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಉಲುಂದರ್ ಪೇಟೆ ಬಳಿಯ ಎಂ.ಗುನ್ನಥೂರು ಗ್ರಾಮದಲ್ಲಿನ ಜನರಿಗೆ ಈ ರೀತಿಯ ಉಡುಗೊರೆಗಳನ್ನು ವಿತರಿಸಲಾಗಿದೆ.
ಈ ಗ್ರಾಮದಲ್ಲಿ 3 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದರು. ಈ ಪೈಕಿ 20ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರು. ಈ ಕಾರಣಕ್ಕಾಗಿ ಇಲ್ಲಿ ರಾಜ್ಯ ಆರೋಗ್ಯ ಇಲಾಖೆ ವಿಶೇಷ ಕೊರೋನಾ ಲಸಿಕೆ ಶಿಬಿರ ನಡೆಸುತ್ತಿದೆ. ಪ್ರತಿ ದಿನ 500ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ, ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದರು. 48 ಗಂಟೆಗಳಲ್ಲಿ ಕೇವಲ 50 ಜನ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದರು.
ಆರೋಗ್ಯ ಅಧಿಕಾರಿಗಳು ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಲಿಲ್ಲ. ಹೀಗಾಗಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಲಸಿಕೆ ಹಾಕಿಸಿಕೊಂಡವರಿಗೆ ಉಡುಗೊರೆಗಳನ್ನು ವಿತರಿಸುವ ಕಾರ್ಯ ಮಾಡಿ, ಜನರನ್ನು ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ.
ಲಸಿಕೆ ಹಾಕಿಸಿಕೊಂಡವರಿಗೆ ಅಡುಗೆ ಮನೆ ವಸ್ತುಗಳು ಮತ್ತು ಪ್ಲಾಸ್ಟಿಕ್ ಬಿಂದಿಗೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಗ್ರಾಮಸ್ಥರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದಾರೆ.
ಲಸಿಕೆ ಹಾಕಿಸಿಕೊಳ್ಳಲು ಜನರು ಭಯ ಪಡುತ್ತಿರುವುದಕ್ಕೆ ಲಸಿಕಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿತ್ತು. ಈ ಪರಿಸ್ಥಿತಿ ಕಂಡ ಗ್ರಾಮದ ಸಾಮಾಜಿಕ ಕಾರ್ಯಕರ್ತ, ತಂಬಿದುರೈ ಮತ್ತು ಯುವಕರ ತಂಡ ಲಸಿಕೆ ಹಾಕಿಸಿಕೊಂಡವರಿಗೆ ಪ್ರೋತ್ಸಾಹವಾಗಿ ಅಡುಗೆ ಮನೆ ವಸ್ತುಗಳು ಸೇರಿದಂತೆ ಇತರೆ ಉಡುಗೊರೆಗಳನ್ನು ಹಂಚಲು ಮುಂದಾಗಿದ್ದಾರೆ.
ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ಪ್ಲೇಟ್, ಗ್ಲಾಸ್, ಟಿಫನ್ ಬಾಕ್ಸ್ ಮತ್ತು ಪ್ಲಾಸ್ಟಿಕ್ ಬಿಂದಿಗೆಯಂತಹ ವಸ್ತುಗಳನ್ನು ನೀಡುತ್ತಿದ್ದಾರೆ. ಇದರೊಂದಿಗೆ ಜನರನ್ನು ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ.
ಕೊರೋನಾ ಲಸಿಕೆ ಪಡೆಯಲು ಬರುವ ಪ್ರತಿಯೊಬ್ಬರೂ ಮೇಲಿನ ಒಂದು ವಸ್ತುವನ್ನು ಉಡುಗೊರೆಯಾಗಿ ತೆಗೆದುಕೊಳ್ಳಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದರು.
ಈ ಪ್ರಕಟಣೆ ಗುನ್ನತೂರು ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹರಡಿ, ಲಸಿಕಾ ಶಿಬಿರದತ್ತ ಜನ ಸಾಗರವೇ ಹರಿಯುತ್ತಿದೆ. ವೈದ್ಯರೇ ಕರೆದು ಕರೆದು ಲಸಿಕೆ ನೀಡುತ್ತೇವೆ ಎಂದರೂ ಹಾಕಿಸಿಕೊಳ್ಳದ ಜನ, ಸದ್ಯ ಸರತಿ ಸಾಲಿನಲ್ಲಿ ಬಂದು ಗಂಟೆಗಟ್ಟಲೇ ಕಾಯ್ದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
ನಿನ್ನೆ ಒಂದೇ ದಿನ 80 ಗ್ರಾಮಸ್ಥರು ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಯಾರೂ ಮನಸ್ಸು ಮಾಡದ ಸಂದರ್ಭದಲ್ಲಿ ಈ ಅಭಿಯಾನ ಪ್ರಾರಂಭಿಸಲಾಯಿತು. ಹೀಗಾಗಿ ಅಡುಗೆ ಮನೆಗೆ ಬೇಕಾಗುವ ವಸ್ತುಗಳನ್ನು ತಂದು ಕೊಡುವ ಕುರಿತು ನಾವು ನಿರ್ಧರಿಸಿದೆವು. ಹೀಗಾಗಿ 48 ಗಂಟೆಗಳಲ್ಲಿ 50ಕ್ಕಿಂತ ಕಡಿಮೆ ಇದ್ದ ಫಲಾನುಭವಿಗಳ ಸಂಖ್ಯೆ, ಸದ್ಯ 130ಕ್ಕೆ ಏರಿಕೆ ಕಂಡಿದೆ. ಕೇವಲ 24 ಗಂಟೆಗಳಲ್ಲಿ 80ಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ತಂಬಿದುರೈ ಹೇಳಿದ್ದಾರೆ. ತಂಬಿದುರೈ ಮತ್ತು ಅವರ ತಂಡದ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.