ವಿಜಯಸಾಕ್ಷಿ ಸುದ್ದಿ, ಯಾದಗಿರಿ
ಲಸಿಕೆ ಪಡೆಯಬೇಕಾಗುತ್ತದೆಂದು ಮನೆಗೆ ಬೀಗ ಹಾಕಿ ಬಹುತೇಕ ಗ್ರಾಮಸ್ಥರು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸಲು ಹೋಗಿದ್ದ ಅಧಿಕಾರಿಗಳಿಗೆ ಶಾಕ್ ಆಗಿದೆ.
ಊರಿನ ಬಹುತೇಕ ಮನೆಗಳಿಗೆ ಬೀಗ ಹಾಕಿ ಗ್ರಾಮಸ್ಥರು ಪರಾರಿಯಾಗಿದ್ದಾರೆ. ಯಾದಗಿರಿ ತಾಲೂಕಿನ ಕಂಚಗಾರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಲಸಿಕೆ ಪಡೆಯಲು ಹಿಂದೇಟು ಹಾಕಿ, ಮನೆಗಳಿಗೆ ಬೀಗ ಹಾಕಿ ಗ್ರಾಮಸ್ಥರು ಹೋಗಿದ್ದಾರೆ.
ಇನ್ನೂ ಹಲವರು ಮನೆಯೊಳಗೆ ಇದ್ದರೂ ಹೊರಬಾರದೆ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹಲವರು ಲಸಿಕೆ ಪಡೆಯಿದಿದ್ದರೂ ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಅಧಿಕಾರಿಗಳ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ.
ಹೀಗಾಗಿ ಸಹಾಯಕ ಆಯುಕ್ತ ಪ್ರಶಾಂತ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಮನೆಯಲ್ಲಿದ್ದವರನ್ನು ಹುಡುಕಿ ತಿಳುವಳಿಕೆ ಹೇಳಿ, ಲಸಿಕೆ ಹಾಕಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಆದರೂ ಗ್ರಾಮದ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಬಹುತೇಕ ಜನರು ಲಸಿಕೆ ಪಡೆಯದೆ ನಿಷ್ಕಾಳಜಿ ತೋರಿಸುತ್ತಿದ್ದಾರೆ. ಲಸಿಕೆ ಹಾಕಿಸಲು ಅಧಿಕಾರಿಗಳು ಮಾತ್ರ ಸಂಕಷ್ಟ ಪಡುತ್ತಿದ್ದಾರೆ.