ವಿಜಯಸಾಕ್ಷಿ ಸುದ್ದಿ, ನವದೆಹಲಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೊರೊನಾ ತಡೆಗಟ್ಟಲು ಲಾಕ್ ಡೌನ್ ಒಂದೇ ಪರಿಹಾರ ಎಂದು ಹೇಳಿದ್ದಾರೆ.
ಈ ಹಿಂದೆ ಲಾಕ್ ಡೌನ್ ನಿಂದ ದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಆದರೆ, ಸದ್ಯ ಕೊರೊನಾ ವಿರುದ್ಧ ಹೋರಾಡಲು ಲಾಕ್ ಡೌನ್ ಮಾಡುವುದೇ ಸೂಕ್ತ ಎಂದು ಹೇಳಿಕೆ ನೀಡಿದ್ದಾರೆ.
ಸದ್ಯ ದೇಶದಲ್ಲಿನ ಕೊರೊನಾ ಹಾವಳಿ ಗಮನಿಸಿದರೆ ಲಾಕ್ ಡೌನ್ ಒಂದೇ ಅಸ್ತ್ರವಾಗಿ ಕಾಣುತ್ತಿದೆ. ನ್ಯಾಯ ಯೋಜನೆಗಳ ಜೊತೆಗೆ ಲಾಕ್ ಡೌನ್ ಜಾರಿ ಮಾಡಬೇಕಿದೆ. ಸರ್ಕಾರದ ನಿಷ್ಕ್ರೀಯತೆಯಿಂದ ಅಮಾಯಕರು ಸಾವನ್ನಪ್ಪುತ್ತಿದ್ದಾರೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ದೆಶದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದಾಗಿ ಕೇಂದ್ರ ಸರ್ಕಾರ ಈ ಹಿಂದೆ ಲಾಕ್ ಡೌನ್ ಜಾರಿಗೊಳಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್, ಯೋಜಿತವಲ್ಲದ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ವಲಸಿಗರು ಸಂಕಷ್ಟ ಅನುಭವಿಸಿದ್ದಾರೆ ಎಂದು ವಾಗ್ದಾಳಿ ನಡೆಸಿತ್ತು. ಸದ್ಯ ದೇಶದಲ್ಲಿ ಪ್ರತಿ ದಿನ ಮೂರರಿಂದ ನಾಲ್ಕು ಲಕ್ಷದ ಆಸುಪಾಸಿನಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಲಾಕ್ ಡೌನ್ ಒಂದೇ ಸದ್ಯದ ಅಸ್ತ್ರ ಎಂದು ಹೇಳಿದ್ದಾರೆ.