ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಮೂವತ್ತು ವರ್ಷಗಳ ಆಡಳಿತದ ಅಂಜುಮನ್ ಇಸ್ಲಾಂ ಕಮಿಟಿಯ ಲೆಕ್ಕ ಕೇಳಲು ಹೋದ ಗ್ರಾಮ ಪಂಚಾಯತಿ ಸದಸ್ಯನ ಮಕ್ಕಳು ಹಾಗೂ ಬೆಂಬಲಿಗರು ಇಬ್ಬರ ಮೇಲೆ ಹಲ್ಲೆ ಮಾಡಿ ಓರ್ವನಿಗೆ ಚಾಕು ಇರಿದ ಘಟನೆ ಜರುಗಿದೆ.
ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಮಹಬೂಬಸಾಬ ಮಕ್ತುಮಸಾಬ ದೊಡ್ಡಮನಿ ಹಾಗೂ ಫಕ್ರುದ್ದೀನ ಪೆಂಡಾರಿ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳಸಾಪೂರ ಗ್ರಾಮ ಪಂಚಾಯತಿ ಸದಸ್ಯ ನಜೀರಸಾಬ ಅಂಗಡಿ, ಮಕ್ಕಳಾದ ಸದ್ದಾಂ, ಸಾಧಿಕ್ ಹಾಗೂ ಸಂಬಂಧಿಗಳು, ಗಾಯಾಳು ಮಹಿಬೂಬಸಾಬ್ ಅವರ ತಂದೆ ಮಕ್ತುಮಸಾಬನನ್ನು ಲೆಕ್ಕ ಕೇಳಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಮಹಬೂಬಸಾಬನಿಗೆ ಸಾಧಿಕ್ ಅಂಗಡಿ ಚಾಕುವಿನಿಂದ ತಲೆಗೆ ಇರಿದಿದ್ದಾನೆ. ಅಲ್ಲೆಯೇ ಇದ್ದ ಫಕ್ರುಸಾಬನ ಮೇಲೂ ಹಲ್ಲೆ ಮಾಡಲಾಗಿದ್ದು, ಗಾಯಗೊಂಡ ಇಬ್ಬರೂ ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ನಜೀರಸಾಬ ಅಂಗಡಿ ಸೇರಿದಂತೆ ಒಂಬತ್ತು ಜನರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರತಿದೂರು ದಾಖಲು
ಅಂಜುಮನ್ ಎ ಇಸ್ಲಾಂ ಕಮಿಟಿಯ ಹಿರಿಯರಾದ
ಮಕ್ತುಮಸಾಬ ಮಾಬುಸಾಬ ದೊಡ್ಡಮನಿ ಎಂಬುವರು ಮನೆ ಮುಂದೆ ಫಿರ್ಯಾದಿ ಮಕಬೂಲಸಾಬ ಚತ್ತುಸಾಬ ಪೆಂಡಾರಿ ಹಾಗೂ ಹಿರಿಯರು ಹೋಗಿ ಲೆಕ್ಕದ ಮಾಹಿತಿ ಕೇಳಿದಾಗ ಮಕಬೂಲಸಾಬ ಮಾಬುಸಾಬ ದೊಡ್ಡಮನಿ, ತೌಶೀಪ್ ಮಕ್ತುಮಸಾಬ ದೊಡ್ಡಮನಿ ಹಾಗೂ ಆಶೀಫ್ ಮಾಬುಸಾಬ ದೊಡ್ಡಮನಿ ಸೇರಿದಂತೆ ಹತ್ತು ಜನರ ತಂಡ ಅವಾಚ್ಯ ಶಬ್ದಗಳಿಂದ ಬೈದು, ನಾಶಿರ ಹೊನ್ನೂರಸಾಬ ಪೆಂಡಾರಿ, ಫಕ್ರುಸಾಬ ರಾಜೇಸಾಬ ಪೆಂಡಾರಿ ಹಾಗೂ ಸಾಧಿಕ್ ನಜೀರಸಾಬ ಅಂಗಡಿ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲ ಗ್ರಾಮ ಪಂಚಾಯತಿ ಸದಸ್ಯ ನಜೀರಸಾಬ ಹುಚ್ಚುಸಾಬ ಅಂಗಡಿ ಎಂಬಾತನಿಗೆ ಅಡ್ಡಗಟ್ಟಿ ನಿಲ್ಲಿಸಿ, ಗಟ್ಟಿಯಾಗಿ ಹಿಡಿದು, ಅಕ್ರಮ ತಡೆಯೊಡ್ಡಿ, ಇನ್ನೊಮ್ಮೆ ಮನೆ ಹತ್ರ ಜೀವ ತಗೆತೀವಿ ಅಂತ ಬೆದರಿಕೆವೊಡ್ಡಿದ್ದಾರೆ ಎಂದು ಪ್ರತಿದೂರು ನೀಡಲಾಗಿದೆ.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈ ಗೊಂಡಿದ್ದಾರೆ.