ವಿಜಯಸಾಕ್ಷಿ ಸುದ್ದಿ, ಗದಗ
ಬಿಜೆಪಿ ಕಾರ್ಯಕರ್ತನ ಬೈಕ್ ತಡೆದಿದ್ದಕ್ಕೆ ಅಮಾನತಾಗಿದ್ದ ಬೆಟಗೇರಿ ಠಾಣೆಯ ಮಹಿಳಾ ಎಎಸ್ಐ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದು, ಅವರ ಅಮಾನತು ಆದೇಶ ಹಿಂಪಡೆಯಲಾಗಿದೆ.
ಮೇ 17ರಂದು ಬೆಟಗೇರಿಯ ಟಿಂಗಿನಕಾಯಿ ಬಜಾರ್‌ನಲ್ಲಿ ಲಾಕ್ ಡೌನ್ ಇದ್ದರೂ ಬೈಕ್‌ನಲ್ಲಿ ಬಂದಿದ್ದ ಅಬ್ಬಿಗೇರಿ ಗ್ರಾಮದ ಬಿಜೆಪಿ ಕಾರ್ಯಕರ್ತನನ್ನು ಕರ್ತವ್ಯದಲ್ಲಿ ಇದ್ದ ಮಹಿಳಾ ಎಎಸ್ಐ ಎನ್.ಸಿ. ಮೂಲಿಮನಿ ತಡೆದಿದ್ದರು.
ತಡೆದಿದ್ದೇ ದೊಡ್ಡ ಅಪರಾಧ ಎಂಬಂತೆ ಬಡಪಾಯಿ ಮಹಿಳಾ ಎಎಸ್ಐ ಮೇ 18ರಂದು ಅಮಾನತಾಗಿದ್ದರು. ತಾನಾಯಿತು, ತಮ್ಮ ಕರ್ತವ್ಯವಾಯಿತು ಎಂದು ಯಾರ ಮುಲಾಜಿಗೂ ಬಗ್ಗದೆ ಇಡೀ ಠಾಣೆಯ ಸಿಬ್ಬಂದಿಗೆ ಅಚ್ಚುಮೆಚ್ಚಿನವರಾಗಿದ್ದ ಮೂಲಿಮನಿ ಅವರನ್ನು ಅಮಾನತು ಮಾಡಿರುವುದರಿಂದ ಅನೇಕ ಪೊಲೀಸರು, ಅಧಿಕಾರಿಗಳಿಗೆ ದಿಗ್ಬ್ರಮೆ ಆಗಿತ್ತು. ಸೀದಾ ಸಾದಾ ನೌಕರಿ ಮಾಡೋರಿಗೆ ಈ ರೀತಿ ಆದ್ರೆ ನಮ್ಮಂಥವರ ಪರಿಸ್ಥಿತಿ ಹೇಗೆ ಎಂದು ಆತಂಕಕ್ಕೆ ಒಳಗಾಗಿದ್ದರು.
`ಕಾರ್ಯಕರ್ತನ ಬೈಕ್ ತಡೆದ ಮಹಿಳಾ ಎಎಸ್ಐ ಸಸ್ಪೆಂಡ್, ಶಾಸಕರೇ ಇದು ಸರೀನಾ?’ ಎಂಬ ಶಿರೋನಾಮೆಯಲ್ಲಿ ವಿಜಯಸಾಕ್ಷಿ ವೆಬ್ ಪೋರ್ಟಲ್ ನಲ್ಲಿ ಮೇ-21 ರ ಮುಂಜಾನೆ 9 ಗಂಟಿಗೆ ಸುದ್ದಿ ಬಿತ್ತರಿಸಲಾಗಿತ್ತು. ಇದನ್ನು ಗಮನಿಸಿದ ಹಿರಿಯ ಅಧಿಕಾರಿಗಳು ಮೇ 21ರ ಮುಂಜಾನೆ 11 ಗಂಟೆ ಸುಮಾರಿಗೆ ಸಸ್ಪೆಂಡ್ ಆಗಿದ್ದ ಮಹಿಳಾ ಎಎಸ್ಐ ಎನ್ ಸಿ ಮೂಲಿಮನಿ ಅವರಿಂದ ಅಮಾನತು ಆದೇಶ ಹಿಂಪಡೆಯಲು ಮನವಿ ಸ್ವೀಕರಿಸಿದ್ದರು.
ಸೌಮ್ಯ ಸ್ವಭಾವದ ಎಸ್ಪಿ ಯತೀಶ್ ಎನ್. ಅವರು ವಿಚಾರಣೆಯನ್ನು ಬಾಕಿ ಇರಿಸಿ ಅಮಾನತು ಆದೇಶ ರದ್ದು ಮಾಡಿ ಕರ್ತವ್ಯಕ್ಕೆ ಹಾಜರಾಗಲು ಸೋಮವಾರ ಮೇ 24ರಂದು ಆದೇಶ ಹೊರಡಿಸಿದ್ದಾರೆ.