ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ತಾಲೂಕಿನಾದ್ಯಂತ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಾಗರಪಂಚಮಿಯಲ್ಲಿ ಜೋಕಾಲಿ ಆಡುವದು ಸಂಪ್ರದಾಯವಾಗಿದ್ದು, ಪಟ್ಟಣದ ಎಪಿಎಂಸಿ ಆವರಣ ಮರವೊಂದಕ್ಕೆ ಕಟ್ಟಿದ ಜೋಕಾಲಿಯಲ್ಲಿ ಮಂಗವೊಂದು ಕುಳಿತುಕೊಂಡು ತಾನೇನು ಕಡಿಮೆ ಎನ್ನುವಂತೆ ಜೋಕಾಲಿ ಆಡಿದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಹಬ್ಬದ ವಿಶೇಷವಾಗಿತ್ತು.
ನಾಗರ ಪಂಚಮಿಯ ನಿಮಿತ್ತ ಮಕ್ಕಳು, ಮಹಿಳೆಯರು ಜೋಕಾಲಿ ಆಡಲು ಹಗ್ಗವನ್ನು ಕಟ್ಟಲಾಗಿತ್ತು. ನಾಗರ ಹಾವಿಗೆ ಹಾಲು ಎರೆಯಲು ಜನರು ಹೋಗಿದ್ದರಿಂದ ಯಾರೂ ಇಲ್ಲದ ಸಮಯ ನೋಡಿದ ಕೋತಿಯೊಂದು ಜೋಕಾಲಿಯ ಮೇಲೆ ಕುಳಿತುಕೊಂಡು ಬಿಂದಾಸ್ ಆಗಿ ಜೋಕಾಲಿ ಆಡಿದ ವಿಡಿಯೋ ಪಟ್ಟಣದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.
ಜೋಕಾಲಿ ಆಡುತ್ತಿರುವ ಕೋತಿ ನೋಡಲು ಜನ ಸ್ವಲ್ಪ ಹೊತ್ತು ಮುಗಿ ಬಿದ್ದಿದ್ದರು. ಇದಾವುದರ ಪರಿವೆ ಇಲ್ಲದಂತೆ ಕೋತಿ ಜೋಕಾಲಿಯಲ್ಲಿ ಕುಳಿತು ಆಟವಾಡಿ ಬೇಸರವಾದಂತೆ ಜೋಕಾಲಿಯಿಂದ ಇಳಿದು ಹೋಗಿದ್ದು ಕಂಡು ಬಂದಿತು.