ವಿಜಯಸಾಕ್ಷಿ ಸುದ್ದಿ, ಮುಂಬಯಿ
ನಗರದಲ್ಲಿನ ಎರಡು ಅಂತಸ್ತಿನ ವಸತಿ ಕಟ್ಟಡವೊಂದು ಕುಸಿತಗೊಂಡ ಪರಿಣಾಮ 11 ಜನ ಸಾವನ್ನಪ್ಪಿದ್ದು, 8 ಜನ ಗಾಯಗೊಂಡಿರುವ ಘಟನೆ ಮಲಾಡ್ ವೆಸ್ಟ್ ಪ್ರದೇಶದ ನ್ಯೂ ಕಲೆಕ್ಟರ್ ಕಾಂಪೌಂಡ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಈಗಾಗಲೇ 11 ಜನ ಸಾವನ್ನಪ್ಪಿದ್ದು, 8 ಜನ ಗಾಯಗೊಂಡವರನ್ನು ರಕ್ಷಿಸಲಾಗಿದೆ. ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾತ್ರಿ 11 ಗಂಟೆ ಸುಮಾರಿಗೆ ಈ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಕ್ಕದ 3 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಹಲವರು ಕಟ್ಟಡದ ಅವಶೇಷದಡಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಮತ್ತು ರಕ್ಷಣಾ ತಂಡಗಳ ಸಿಬ್ಬಂದಿ ಆಗಮಿಸಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.