ವಿಜಯ ಶಿಂಧೆಯಿಂದ ಮೋಸಹೋದ ಮಹಿಳೆಯ ಕಣ್ಣೀರು `ಈ ಮನುಷ್ಯ ಹೀಗೆ ಮಾಡ್ಬಾರದಿತ್ರೀ…’

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ವಿಜಯ ಶಿಂಧೆಯನ್ನು ಸಣ್ಣವನಿದ್ದಾಗಿಂದಲೂ ನೋಡಿದ್ದೇವೆ. ನಮ್ಮ ಮನೆಯ ಎದುರೇ ಶಿಂಧೆಯ ಮನೆಯಿತ್ತು. ನಾವು ಪಟ್ಟ ಕಷ್ಟಗಳನ್ನೆಲ್ಲ ಆತ ಕಣ್ಣೆದುರೇ ನೋಡಿದ್ದಾನೆ. ಚಹಾ ಅಂಗಡಿ ನಡೆಸುತ್ತ, ಅದೇ ಆದಾಯದಲ್ಲಿ ಜೀವನವನ್ನೂ ನಡೆಸಿ, ಸ್ವಂತ ಸೂರು ನಿರ್ಮಿಸಿಸಿಕೊಳ್ಳುವ ಕನಸು ಕಂಡು ಶಿಂಧೆಯ ಬಳಿ ನಿತ್ಯವೂ 500-800ರೂ, ಹೀಗೆ ಸಾಧ್ಯವಾದಷ್ಟು ಹಣ ಕಟ್ಟುತ್ತಿದ್ದೆ. ದುಡಿದು ತಿನ್ನುವರ ಹೊಟ್ಟೆಯ ಮೇಲೆ ಈ ಮನುಷ್ಯ ಹೀಗೆ ಬರೆ ಎಳೆಯಬಾರದಿತ್ತು. ನಮ್ಮ ಕಷ್ಟಗಳನ್ನು ಕಣ್ಣಾರೆ ಕಂಡಿದ್ದರೂ ಕೂಡ ಹೀಗೆ ಮೋಸ ಮಾಡಬಾರದಿತ್ತು…’
ವಿಜಯ ಶಿಂಧೆ ಕೋಟ್ಯಾಂತರ ರೂ. ಮೋಸ ಮಾಡಿ ಕಣ್ಮರೆಯಾಗಿ, ಮತ್ತೀಗ ಬಂಧನದ ಸುದ್ದಿ ಗದಗದಲ್ಲಿ ಹರಡುತ್ತಿದ್ದಂತೆಯೇ ಒಂದೊಂದೇ ಪ್ರಕರಣಗಳು ಬಯಲಿಗೆ ಬರುತ್ತಿದ್ದು ಹಣ ಕಳೆದುಕೊಂಡವರು ಕಣ್ಣೀರಿಡುತ್ತಿದ್ದಾರೆ.
ಈತನಲ್ಲಿ ಹಣ ಹೂಡಿದ, ನಿತ್ಯದ ದುಡಿಮೆಯ ಗಳಿಕೆಯನ್ನೇ ನಂಬಿಕೊಂಡಿದ್ದ ಸಣ್ಣ ಸಣ್ಣ ವ್ಯಾಪಾರಸ್ಥರೆಲ್ಲರೂ ಕಂಗಾಲಾಗಿದ್ದಾರೆ. ಹತ್ತಾರು ವರ್ಷಗಳಿಂದ ಶಿಂಧೆಯಲ್ಲಿ ಮನೆ/ನಿವೇಶನ ಖರೀದಿಗಾಗಿ ಲಕ್ಷ ಲಕ್ಷ ರೂ. ಹಣ ನೀಡಿದ್ದ ಸಣ್ಣ ಆದಾಯ ಹೊಂದಿದ ವ್ಯಾಪಾರಸ್ಥರು ದಾರಿ ಕಾಣದಂತಾಗಿದ್ದಾರೆ. ಈ ಮಹಿಳೆ ಪುಷ್ಪಾ ಶೆಟ್ಟರ್, ನಗರದ ಗಾಂಧೀ ಸರ್ಕಲ್ ನಲ್ಲಿ ಸಣ್ಣದೊಂದು ಟೀಸ್ಟಾಲ್ ನಡೆಸುತ್ತ ಬದುಕಿನ ಬಂಡಿ ಸಾಗಿಸುತ್ತಿದ್ದವರು. ಸಹಜವಾಗಿಯೇ ಸ್ವಂತದೊಂದು ಮನೆ ನಿರ್ಮಿಸಿಕೊಳ್ಳಬೇಕೆಂದು ಕನಸು ಕಾಣುತ್ತ ಕಳೆದ ಹತ್ತು ವರ್ಷಗಳಿಂದಲೂ ಶಿಂಧೆಯ ಬಳಿ ಆರ್.ಡಿ, ಪಿಗ್ಮಿ ರೂಪದಲ್ಲಿ ನಿಯಮಿತವಾಗಿ ಹಣ ತೊಡಗಿಸುತ್ತಿದ್ದರು. ಇದೀಗ ಶಿಂಧೆಯ ಮೋಸದಾಟ ತಿಳಿಯುತ್ತಿದ್ದಂತೆಯೇ ದಿಕ್ಕು ತೋಚದೇ ಕಣ್ಣಿರಿಡುತ್ತಿದ್ದಾರೆ. ಈಕೆ ಕಳೆದುಕೊಂಡಿದ್ದು ಬರೋಬ್ಬರಿ 21 ಲಕ್ಷ.ರೂ!
ನಮ್ಮದೇ ಮಕ್ಕಳು ಹಣ ಕೇಳಿದರೆ ಯಾಕೆ ಏನು ಎಂದು ವಿಚಾರಿಸಿಯೇ ಹಣ ಕೊಡುತ್ತಿದ್ದ ನಾವು ಈ ಮನುಷ್ಯನನ್ನು ಕಣ್ಣುಮುಚ್ಚಿ ನಂಬಿದ್ದೇ ತಪ್ಪಾಯ್ತೇನೋ. ನಮಗೆ ಮನೆ ಕೊಟ್ಟಿದ್ದು ನಿಜವಾದರೂ, ಆ ಮನೆಯನ್ನ ಬೇರೊಬ್ಬರ ಹೆಸರಿಗೆ ಬರೆದಿದ್ದಾನೆ. ಜಮೀನು ಮಾರಾಟ ಮಾಡಿ ಬಂದ ಹಣವನ್ನೂ ಆತನಿಗೇ ನೀಡಿದ್ದೆವು. ಕೊರೋನಾ ಲಾಕ್ಡೌನ್ ಸಮಯದಲ್ಲಿ ಆದಾಯವೇ ಇಲ್ಲದೆ ಸಂಕಷ್ಟದಲ್ಲಿದ್ದಾಗಲೂ ಯಾರ್ಯಾರಿಂದಲೋ ಸಾಲ ಪಡೆದು ಪಿಗ್ಮಿ ಕಟ್ಟಿದ್ದೇನೆ. ಈ ಮನುಷ್ಯ ಹೀಗೆ ಮಾಡಬಾರದಿತ್ತು.
ಮನೆ/ಜಾಗದ ಮೌಲ್ಯ ಕಡಿಮೆಯೆಂದರೂ 21 ಲಕ್ಷ.ರೂ ಬೆಲೆಬಾಳುತ್ತದೆ. ಹೀಗೆ ಇದ್ದಕ್ಕಿದ್ದಂತೆ ಲಾಸ್ ಆಗಿದೆ ಎಂದು ಹೇಳುತ್ತ ನಾಪತ್ತೆಯಾದರೆ ನಮ್ಮ ಗತಿಯೇನು? ಈಗ ಮನೆಯನ್ನಾದರೂ ಕೊಡಿಸಿ. ಇಲ್ಲವಾದರೆ ಹಣವನ್ನಾದರೂ ಮರಳಿ ಕೊಡಿಸಬೇಕು. ಟೀ ಅಂಗಡಿ ಬಿಟ್ಟರೆ ನಮಗೆ ಬೇರೆ ಆಧಾರವಿಲ್ಲ. ಈತನಿಂದ ಇನ್ನೂ ಸಾಕಷ್ಟು ಜನ ಮೋಸಹೋಗಿದ್ದಾರೆ. ಆದರೆ, ಯಾರೂ ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಪುಷ್ಪಾ ಶೆಟ್ಟರ್ ಕಣ್ಣೀರಿಟ್ಟರು.


Spread the love

LEAVE A REPLY

Please enter your comment!
Please enter your name here