ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಬಗ್ಗೆ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ. ವಿರೇಂದ್ರ ಪಾಟೀಲ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ 186 ಸ್ಥಾನ ಪಡೆದುಕೊಂಡಿತ್ತು. ಆಗಿನ ಗತವೈಭವ ಮರಳಿಸಲು ಪ್ರಯತ್ನಿಸುತ್ತೇವೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಹೇಳಿದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
2023ರ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿದ್ದೇವೆ ಎಂದರು.
ಯಡಿಯೂರಪ್ಪ ನಂತರ ಲಿಂಗಾಯತರ ಪ್ರಮುಖ ನಾಯಕ ಎಂ.ಬಿ.ಪಾಟೀಲ್ ರೆಂಬ ಸುದ್ದಿಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ನನಗೆ ನಾನೇ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾ..? ಜನ ಸರ್ಟಿಫಿಕೇಟ್ ಕೊಡಬೇಕಾಗುತ್ತೆ. ನಮಗೆ ನಾವೇ ಸ್ವಯಂ ಘೋಷಿತ ನಾನೇ ನಾಯಕ, ನೀನೇ ನಾಯಕ, ನಾನೇ ಸಿಎಂ, ನೀನೇ ಸಿಎಂ ಎಂದು ಆಗುವುದಿಲ್ಲ. ಜನ ಏನು ಬಯಸುತ್ತಾರೆ ಅದು ಆಗುತ್ತದೆ. ಜನ ಹೇಳಿದ್ರೆ ಮಾತ್ರ ನಾಯಕರಾಗಲು ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಲಿಂಗಾಯತರಲ್ಲಿ ಯಡಿಯೂರಪ್ಪ ಅತ್ಯಂತ ಎತ್ತರದ ನಾಯಕರು. ಕಾಂಗ್ರೆಸ್‍ನಲ್ಲಿ ಪ್ರಕಾಶ ಹುಕ್ಕೇರಿ, ಎ.ಬಿ.ಪಾಟೀಲ್ ಅವರು ನಮಗಿಂತ ಬಹಳ ಹಿರಿಯ ನಾಯಕರಿದ್ದಾರೆ ಎಂದು ಹೇಳಿದರು. ಮುಂಬರುವ ಸಿಎಂ ವಿಚಾರಕ್ಕೆ ಪ್ರತಿಕ್ರಯಿಸಿದ ಎಂ.ಬಿ.ಪಾಟೀಲ್, ಯಾರು ಸ್ವಯಂ ಘೋಷಿತ ಸಿಎಂ ಆಗಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಸಿಎಂ ಆಗಲು ಮೊದಲು ಜನಾದೇಶ ಬರಬೇಕು. ಕನಿಷ್ಠ ಪಕ್ಷ 125 ಸ್ಥಾನ ಗೆಲ್ಲಬೇಕು. ನಮ್ಮ ಟಾರ್ಗೆಟ್ 150 ಇದೆ. 125 ಗೆದ್ದು ಬಹುಮತ ಪಡೆಯಬೇಕು. ಆಮೇಲೆ ವೀಕ್ಷಕರು ಬರುತ್ತಾರೆ, ಶಾಸಕರ ಅಭಿಪ್ರಾಯ ಪಡೆದುಕೊಂಡು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.