ವಿಜಯಸಾಕ್ಷಿ ಸುದ್ದಿ, ಮಡಿಕೇರಿ
ಜಿಲ್ಲೆಯಲ್ಲಿನ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿದ್ದ ವೃದ್ಧೆಯೊಬ್ಬರನ್ನು ಆಂಬುಲೆನ್ಸ್ ಚಾಲಕ ನಡು ರಸ್ತೆಯಲ್ಲಿಯೇ ಬಿಟ್ಟು ಹೋದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ 60 ವರ್ಷದ ಪೊನ್ನಮ್ಮ ಎಂಬುವವರು ಉಸಿರಾಟದ ತೊಂದರೆಯಿಂದಾಗಿ ಮೇ. 15ರಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಅವರು ಗುಣಮುಖರಾಗಿದ್ದರು. ಆ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಆದರೆ, ಪೊನ್ನಮ್ಮ ಅವರನ್ನು ಕರೆತಂದ ಆಂಬುಲೆನ್ಸ್ ಚಾಲಕ ಮಾತ್ರ ಅವರನ್ನು ಮನೆಯವರೆಗೆ ಬಿಡದೆ ಐಗೂರು ಜಂಕ್ಷನ್ನರಲ್ಲಿ ಬಿಟ್ಟು ತೆರಳಿದ್ದಾನೆ. ಅಲ್ಲಿಂದ ವೃದ್ಧೆಯ ಮನೆ 2 ಕಿ.ಮೀ ದೂರವಿದೆ. ಅನಿವಾರ್ಯವಾಗಿ ವೃದ್ಧೆ ನಡೆದುಕೊಂಡೆ ತೆರಳಿದ್ದಾರೆ.
ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಹಾಗೂ ಸಂಜೆ ಹೊತ್ತು ಆಗಿದ್ದರಿಂದಾಗಿ ಈ ರಸ್ತೆಯಲ್ಲಿ ಯಾವುದೇ ಜನ ಸಂಚಾರ ಇರಲಿಲ್ಲ. ಇಲ್ಲಿ ಸಂಜೆ ಹೊತ್ತು ಕಾಡಾನೆಗಳ ಭಯ ಕೂಡ ಇರುತ್ತದೆ. ಒಂದು ವೇಳೆ ವೃದ್ಧೆ ಭಯದಿಂದ ಹಾಗೂ ಅಸ್ವಸ್ಥತೆಯಿಂದ ನಿತ್ರಾಣಗೊಂಡರೆ ಯಾರು ಹೊಣೆ? ಅಲ್ಲದೇ, ಆಸ್ಪತ್ರೆಯಿಂದ ಬಿಡುಗಡೆಯಾದ ಕುರಿತು ಕೂಡ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾದಿಂದಾಗಿ ವೃದ್ಧರು, ಮಹಿಳೆಯರು, ಯುವತಿಯರು, ಮಕ್ಕಳು ಚಿಕಿತ್ಸೆ ಪಡೆಯುತ್ತಿರುತ್ತಾರೆ. ಅವರನ್ನು ದಾರಿ ಮಧ್ಯೆ ಹೀಗೆ ಬಿಟ್ಟು ಹೋದರೆ ಏನು ಮಾಡುವುದು? ಆಸ್ಪತ್ರೆಗಳಿಗೆ ಹಾಗೂ ಚಾಲಕರಿಗೆ ಪರಿಜ್ಞಾನವಿರಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.