ವಿಜಯಸಾಕ್ಷಿ ಸುದ್ದಿ, ಗದಗ
ಕೊರೊನಾ ರಾಜ್ಯದ ತುಂಬೆಲ್ಲ ತಾಂಡವಾಡುತ್ತಿದೆ. ಇದು ಇಡೀ ದೇಶವನ್ನೇ ಸದ್ಯ ನಲುಗಿಸುತ್ತಿದೆ. ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದಾಗಿ ಆಕ್ಸಿಜನ್, ವೆಂಟಿಲೇಟರ್ ತೊಂದರೆ ತಲೆದೋರುತ್ತಿದ್ದು, ಜಿಲ್ಲೆಯಲ್ಲಿ ಕೂಡ ಮೂವರು ವೆಂಟಿಲೇಟರ್ ಸಮಸ್ಯೆಯಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ನಾಲ್ವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜಿಲ್ಲೆಯ ಜಿಮ್ಸ್ ಹಾಗೂ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಕೂಡ ವೆಂಟಿಲೇಟರ್ ಸಂಪೂರ್ಣವಾಗಿ ಭರ್ತಿಯಾಗಿತ್ತು. ಹೀಗಾಗಿ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಸಾವನ್ನಪ್ಪುವಂತಾಗಿದೆ.
ತೀವ್ರ ಉಸಿರಾಟದ ತೊಂದರೆಯಿಂದ ರೋಗಿಗಳು ನರಳಾಟ ನಡೆಸುತ್ತಿದ್ದರು. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಿದರೆ ಮಾತ್ರ ಅವರು ಬದುಕುತ್ತಾರೆ ಎಂದು ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ಕುಟುಂಬಸ್ಥರು ವೆಂಟಿಲೇಟರ್ ಗಾಗಿ ಅಲೆದಾಡುತ್ತಿದ್ದರು. ಅದೆಷ್ಟೇ ಪ್ರಯತ್ನ ನಡೆಸಿದರೂ ವೆಂಟಿಲೇಟರ್ ಮಾತ್ರ ಸಿಗಲಿಲ್ಲ. ಹೀಗಾಗಿ ಮೂವರು ರೋಗಿಗಳು ಮುಂಡರಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೃತರ ಪೈಕಿ ಇಬ್ಬರು ಮುಂಡರಗಿ ತಾಲೂಕಿನ ಬಿದರಳ್ಳಿ, ಬೂದಿಹಾಳ ಗ್ರಾಮದವರಾಗಿದ್ದು, ಒಬ್ಬರು ಕೊಪ್ಪಳ ಜಿಲ್ಲೆಯ ನಿವಾಸಿ ಎಂದು ಹೇಳಲಾಗುತ್ತದೆ.