ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಭಾರತದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರಿಗೆ ಕೊರೊನಾ ಬೆನ್ನು ಬಿದ್ದಿದೆ.
ಪ್ರಸಿದ್ಧ್ ಕೃಷ್ಣ ಅವರು ಇಂಗ್ಲೆಂಡ್ ನಲ್ಲಿ ನಡೆಯುವ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಇತ್ತೀಚೆಗೆ ಕೊರೊನಾದಿಂದ ರದ್ದಾಗಿದ್ದ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಪ್ರಸಿದ್ಧ್ ಕೃಷ್ಣ ಆಡುತ್ತಿದ್ದರು.
ಪ್ರಸಿದ್ಧ್ ಕೃಷ್ಣ ಅವರು ಐಪಿಎಲ್ ರದ್ದಾದ ಹಿನ್ನೆಲೆಯಲ್ಲಿ ನಗರದಲ್ಲಿನ ತಮ್ಮ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಕೊರೊನಾ ಟೆಸ್ಟ್ ಗೆ ಒಳಗಾಗಿದ್ದಾರೆ. ಈ ಮೊದಲು ಕೋಲ್ಕತ್ತಾ ತಂಡದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಸೋಂಕು ತಗುಲಿತ್ತು. ಆ ನಂತರ ಬಿಸಿಸಿಐ ಐಪಿಎಲ್, ಟೂರ್ನಿಯನ್ನೇ ರದ್ದು ಮಾಡಿತ್ತು. ಹೀಗಾಗಿ ಎಲ್ಲ ಆಟಗಾರರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ.
ಪ್ರಸಿದ್ಧ್ ಕೃಷ್ಣ ಅವರು 7 ಪಂದ್ಯಗಳಿಂದ 8 ವಿಕೆಟ್ ಕಬಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಪ್ರಸಿದ್ಧ್ ಕೃಷ್ಣ ಅವರು ಐಪಿಎಲ್ ನಲ್ಲಿ ನೀಡಿದ ಉತ್ತಮ ಪ್ರದರ್ಶನ ಕಂಡು ಬಿಸಿಸಿಐ ಟೆಸ್ಟ್ ಚಾಂಪಿಯನ್ ಶಿಪ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಿತ್ತು. ಸದ್ಯ ಕೊರೊನಾ ದೃಢ ಪಟ್ಟಿದೆ. ಜೂ. 18ರಂದು ಇಂಗ್ಲೆಂಡ್ ನಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಲಿದೆ.