ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಇಲ್ಲಿಯ ರೈಲ್ವೆ ಆಸ್ಪತ್ರೆಯಲ್ಲಿ ತಮ್ಮ ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಸಮಾಧಾನಗೊಂಡಿದ್ದ ಮಕ್ಕಳು ಐಸಿಯು ವಾರ್ಡ್ ನಲ್ಲಿದ್ದ ಸುಮಾರು ರೂ. 4 ಲಕ್ಷ ಮೌಲ್ಯದ ಆಕ್ಸಿಜನ್ ಯಂತ್ರ ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ನಿವೃತ್ತರಾಗಿದ್ದ 61 ವರ್ಷದ ವ್ಯಕ್ತಿ ಸೋಂಕಿಗೆ ತುತ್ತಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳವಾರ ರೈಲ್ವೆ ಆಸ್ಪತ್ರೆಯ ಐಸಿಯು ವಾರ್ಡ್ ಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ತಂದೆಯ ಸಾವಿನ ನೋವು ಜೀರ್ಣಿಸಿಕೊಳ್ಳಲಾಗದ ಅವರ ಪುತ್ರಿಯರು ಮತ್ತು ಕುಟುಂಬಸ್ಥರು ಐಸಿಯು ವಾರ್ಡ್ ಗೆ ನುಗ್ಗಿ ಆಕ್ಸಿಜನ್ ಯಂತ್ರ ಧ್ವಂಸ ಮಾಡಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತ ವ್ಯಕ್ತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿ ಇದ್ದು, ತಂದೆ ಸಾವಿನ ವಿಚಾರವಾಗಿ ಹೆಣ್ಣು ಮಕ್ಕಳಿಬ್ಬರೂ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಜಗಳ ಮಾಡಿದ್ದರು ಎಂದು ತಿಳಿದು ಬಂದಿದೆ.
ಮೂಗಿನ ಮೂಲಕ ಆಮ್ಲಜನಕ ಸರಬರಾಜು ಮಾಡುವ ಹೈ ಫ್ಲೋ ಆಕ್ಸಿಜನ್ ಉಪಕರಣವನ್ನು ಧ್ವಂಸ ಮಾಡಿದ್ದಾರೆ. ಇದರ ಬೆಲೆ ಸುಮಾರು ರೂ. 4 ಲಕ್ಷ ಎಂದು ಹೇಳಲಾಗಿದೆ.