ವಿಜಯಸಾಕ್ಷಿ ಸುದ್ದಿ, ನವದೆಹಲಿ
ದೇಶದಲ್ಲಿ ಕೊರೊನಾ ಹಾವಳಿ ವಿಪರೀತವಾಗಿ ಹೆಚ್ಚಾಗುತ್ತಿದೆ. ಡಿಸೆಂಬರ್ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗಲಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಲೇ ಇತ್ತು. ಇದರ ಮಧ್ಯೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಿವಿ ಹಿಂಡಿ ಪ್ರಶ್ನಿಸಿದೆ.
ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ ಅನುದಾನ ಏನಾಯಿತು? ಎಂದು ಸುಪ್ರೀಂ ಕೋರ್ಟ್ ಲೆಕ್ಕ ಪರಿಶೋಧನೆಗೆ ಪ್ರಶ್ನಿಸಿದೆ. ಕೊರೊನಾ ವ್ಯಾಕ್ಸಿನ್ ಗಾಗಿ ಬಜೆಟ್ ನಲ್ಲಿ ರೂ. 35 ಸಾವಿರ ಕೋಟಿ ಮೀಸಲಿಡಲಾಗಿದೆ. ಇಲ್ಲಿಯವರೆಗೆ ಎಷ್ಟು ಮೊತ್ತದ ವ್ಯಾಕ್ಸಿನ್ ಖರೀದಿಗೆ ಆದೇಶ ನೀಡಲಾಗಿದೆ? ಲಸಿಕೆಗಳ ಖರೀದಿಗೆ ಯಾವಾಗ ಆದೇಶ ಕೊಡಲಾಯಿತು? ಎಷ್ಟು ಬೆಲೆ? ದಾಖಲೆ ನೀಡಿ ಎಂದು ಆದೇಶಿಸಿದೆ.
ಜನರ ಹಕ್ಕು ಉಲ್ಲಂಘನೆಯಾದಾಗ ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಎರಡನೇ ಅಲೆಯಲ್ಲಿ 18 ರಿಂದ 44 ವರ್ಷದೊಳಗಿನ ಜನರೇ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಈ ವಯಸ್ಸಿನ ಒಳಗಿನವರಿಗೆ ಲಸಿಕೆ ನೀಡಿಲ್ಲ ಏಕೆ? ಎಂದು ಕೋರ್ಟ್ ಪ್ರಶ್ನಿಸಿದೆ. ಅಲ್ಲದೇ, 2 ವಾರಗಳಲ್ಲಿಯೇ ವ್ಯಾಕ್ಸಿನ್ ಪಾಲಿಸಿ ದಾಖಲೆ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.