ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದಂತೆ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿಯೂ ಸದ್ಯ ಈ ದೃಶ್ಯ ಸಾಮಾನ್ಯವಾಗಿದ್ದು, ಜಿಲ್ಲೆ ಕೂಡ ಹೊರತಾಗಿಲ್ಲ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಇಲ್ಲಿಯ ನಗರ ಸಮುದಾಯ ಆಸ್ಪತ್ರೆಯಲ್ಲಿ ನೂಕು ನುಗ್ಗಲು ಉಂಟಾಗಿದೆ. ಜನ ವ್ಯಾಕ್ಸಿನ್ ಗಾಗಿ ಮುಗಿ ಬಿದ್ದಿದ್ದಾರೆ.
ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಸೇರಿದ್ದಾರೆ. ಜನರ ಈ ದೃಶ್ಯ ಕಂಡು ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ಆರೋಗ್ಯ ಸಿಬ್ಬಂದಿ, ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ದಯವಿಟ್ಟು ಎಂದು ಕೈ ಮುಗಿದು ಮನವಿ ಮಾಡಿದ್ದಾರೆ. ಆದರೆ, ಜನರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ದಿನ ನಿತ್ಯ ಸಾವು – ನೋವುಗಳು ಹೆಚ್ಚಾಗಿ ಸಂಭವಿಸುತ್ತಿರುವುದರಿಂದ ಏನೇ ಆದರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಜನರು ಪಟ್ಟು ಹಿಡಿದಂತೆ ವರ್ತಿಸುತ್ತಿದ್ದಾರೆ. ಇಷ್ಟೊಂದು ಭಯ ಹೊಕ್ಕರೂ ಜನರಿಗೆ ಮಾತ್ರ ಬುದ್ಧಿ ಬರುತ್ತಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.