ಶಕ್ತಿ ಶಾಲಿ ಭಾರತ ನಿರ್ಮಾಣವಾದ್ರೆ ಆತ್ಮ ನಿರ್ಭರ ಭಾರತ; ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಎಂಡ್ ಸ್ಟ್ಯಾಂಡ್ ಅಪ್ ಮುಂತಾದ ಮಹತ್ವದ ಯೋಜನೆಗಳ ಸಹಾಯದಿಂದ ಶಕ್ತಿಶಾಲಿ ಭಾರತವನ್ನು ಕಟ್ಟಲು ಸಾಧ್ಯವಿದೆ. ಇದರ ಒಟ್ಟು ಫಲಿತಾಂಶವೇ ಆತ್ಮನಿರ್ಭರ ಭಾರತ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಯಲಚಗುಪ್ಪೆ ಗ್ರಾಮದಲ್ಲಿ ಬೆಂಗಳೂರು ಬಂಟರ ಸಂಘ ನೂತನವಾಗಿ ನಿರ್ಮಿಸಿದ್ದ ಬಿಎಸ್ ಆರ್ ಎನ್ ಎಸ್ ವಿದ್ಯಾನಿಕೇತನ -2 ಶಾಲಾ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಉದ್ಯೋಗ ಸೃಷ್ಠಿ, ಮಹಿಳಾ ಸಶಕ್ತಿಕರಣ ಹಾಗೂ ಪರಸ್ಪರ ಸಹಭಾಗಿತ್ವದ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

ಬಿಎಸ್ ಆರ್ ಎನ್ ಎಸ್ ವಿದ್ಯಾಸಂಸ್ಥೆ ಒಂಬತ್ತು ಎಕರೆ ವಿಸ್ತೀರ್ಣದಲ್ಲಿ ಅದ್ಭುತ ವ್ಯವಸ್ಥೆಯ ಶೈಕ್ಷಣಿಕ ಸಂಕೀರ್ಣವಾಗಿ ನಿರ್ಮಾಣಗೊಂಡಿದೆ. ನಗರದ ಜಂಜಾಟಗಳಿಂದ ದೂರವಿರುವ ಈ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಅನುಕೂಲಕರ ಪ್ರಶಾಂತ ವಾತಾವರಣ ಸೃಷ್ಟಿಸಿಕೊಟ್ಟಿದೆ. ಇಂತದ್ದೊಂದು ಪ್ರಯತ್ನ ಮಾಡಿರುವ ಈ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದರು.

ಈ ವಿದ್ಯಾಸಂಸ್ಥೆ ಶಿಕ್ಷಣದ ಜೊತೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡುವಂತಾಗಲಿ ಎಂದು ನಾನು ಬಯಸುತ್ತೇನೆ. ಇದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಬಲಾಢ್ಯರಾಗುತ್ತಾರೆ. ವಿದ್ಯಾರ್ಥಿಗಳು ಈ ದೇಶದ ಭವಿಷ್ಯ. ದೇಶದ ಉನ್ನತಿಗೆ ಹೆಚ್ಚಿನ ಮಹತ್ವಪೂರ್ಣ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಆಧುನಿಕ ಶಿಕ್ಷಣದ ಜೊತೆ ನಮ್ಮ ಪಾರಂಪರಿಕ ಪ್ರತಿಭೆ-ಕೌಶಲ್ಯಗಳೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಹೊಸ ಶಿಕ್ಷಣ ವ್ಯವಸ್ಥೆಯ ಸಹಾಯದಿಂದ ನಮ್ಮ ಶಿಕ್ಷಣ ವ್ಯವಸ್ಥೆಗೆ ಹೊಸ ದಿಶೆ ದೊರಕಲಿದೆ. ಬಂಟರ ಸಂಘದ ಆರ್ ಎನ್ ಎಸ್ ವಿದ್ಯಾನಿಕೇತನ ಸಂಸ್ಥೆಯೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ ಎಂಬ ನಂಬಿಕೆ ನನಗಿದೆ ಎಂದು ಗೌರವಾನ್ವಿತ ರಾಜ್ಯಪಾಲರು ಭರವಸೆ ವ್ಯಕ್ತಪಡಿಸಿದರು.

ಶಿಕ್ಷಣ ಸಂಸ್ಥೆಗಳು ದೇಶದ ಪ್ರಗತಿಯ ಮಾಧ್ಯಮ – ಶ್ರೀ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮಿಜಿ

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದ್ರು. ದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಶಿಕ್ಷಣಸಂಸ್ಥೆಗಳು ದೇಶದ ಪ್ರಗತಿಯ ಮಾಧ್ಯಮವಾಗಿದೆ. ಯಾರು ಅಕ್ಷರದಿಂದ ದೂರ ಆಗಿರುತ್ತಾರೆ, ಅವರು ಲೋಕ ಕಂಟಕರಾಗಿ ಜನರನ್ನು ಪೀಡಿಸುತ್ತಾರೆ. ಹೀಗಾಗಿ ದೇಶದ ಉನ್ನತಿಗೆ ಶಿಕ್ಷಣ ಅತ್ಯಗತ್ಯವಾಗಿದೆ ಎಂದರು.

ಈ ನಡುವೆ, ಶಿಕ್ಷಣ ನೀಡುವ ನಿಟ್ಟಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಶಿಕ್ಷಣ ಸಂಸ್ಥೆಗಳ ಹೆಸರಲ್ಲಿ ಹಣವನ್ನ ಗಳಿಸುವ ಶಿಕ್ಷಣ ಸಂಸ್ಥೆಗಳಿದ್ದಾವೆ. ಜೊತೆಗೆ ಶಿಕ್ಷಣ ಸಂಸ್ಥೆಯನ್ನೇ ಹಿಡನ್ ಅಜೆಂಡ್ ಇಟ್ಟುಕೊಂಡು ಸಮಾಜಕ್ಕೆ ಕಂಟಕವಾಗುವಂತ ಸಂಸ್ಥೆಗಳೂ ಇದ್ದಾವೆ. ಆದರೆ ಶಿಕ್ಷಣ ಸಂಸ್ಥೆಗಳು ಹೇಗಿರಬೇಕು ಅಂದರೆ, ಜಗತ್ತಿನ ಸಮಾಜದ ಉನ್ನತಿಗೆ ಉತ್ತಮವಾದ ವ್ಯಕ್ತಿತ್ವನ್ನ ರೂಪಿಸುವಂತೆ ಇರಬೇಕು. ಅಂಥಹ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬೆಂಗಳೂರು ಬಂಟ ಸಂಘದ ಮೊದಲನೆ ಘಟಕ ಬೆಳೆÀದು ನಿಂತಿದೆ. ಅದರ ಭಾಗವಾಗಿ ಇಂದು ಎರಡನೇ ಘಟಕ ಲೋಕಾರ್ಪಣೆಗೊಂಡಿದೆ. ಶಿಕ್ಷಣ ಸಂಸ್ಥೆ ಬೆಳೆದು ನಿಂತರೇ ಲೋಕಕ್ಕೆ ಉತ್ತಮ ಪೌರರನ್ನ ಕೊಡುಗೆಯಾಗಿ ನೀಡುತ್ತದೆ ಎಂದು ಹೇಳಿದ್ರು.

ದಕ್ಷಿಣ ಕನ್ನಡ ಭಾಗದಲ್ಲಿ ಬಂಟ ಸಮುದಾಯದವರು ಕೃಷಿಯನ್ನ ಪ್ರಧಾನವಾಗಿಟ್ಟುಕೊಂಡವರು. ಕೃಷಿ ಕ್ಷೇತ್ರದಿಂದ ದೇಶಕ್ಕೆ ಅನ್ನದಾತರಾಗಿ ಬೆಳೆದಂತಹ ಈ ಸಮುದಾಯ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಹೆಜ್ಜೆ ಇಡುತ್ತಿದೆ. ಅದೇ ರೀತಿ ಈ ಶಿಕ್ಷಣ ಸಂಸ್ಥೆ ರಾಜ್ಯಕ್ಕೆ ದೇಶಕ್ಕೆ ಅಷ್ಟೆ ಅಲ್ಲದೆ ಇಡೀ ವಿಶ್ವಕ್ಕೆ ಮಾದರಿಯಾಗಿ ಬೆಳಿಯಲಿ ಎಂದು ಆಶೀರ್ವದಿಸಿದರು.

ಶೀಲ, ಚಾರಿತ್ರ್ಯ, ಸೇವೆ, ತ್ಯಾಗದ ಮನೋಭಾವನೆಯ ಶಿಕ್ಷಣ ನೀಡಬೇಕು – ಸಿ.ಟಿ. ರವಿ
ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾತನಾಡಿ, ಶಿಕ್ಷಣ ಅನ್ನೋದು ಬದುಕನ್ನ ಬದಲಾಯಿಸುವಂತಹ ಸಾಧನ. ಬಂಟರ ಸಂಘ ತಾನು ಮಾಡುತ್ತಿರುವ ಹತ್ತಾರು ಕಾರ್ಯಗಳ ನಡುವೆ ಶಿಕ್ಷಣ ಕ್ಷೇತ್ರವನ್ನ ಆದ್ಯತೆಯಾಗಿ ತೆಗೆದುಕೊಂಡು ಸಮಾಜದಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.

ಶಿಕ್ಷಣವನ್ನ ಬಿಟ್ಟು ದೇಶ ಕಟ್ಟೋಕೆ ಸಾಧ್ಯ ಇಲ್ಲ. ದುರ್ದೈವದ ಸಂಗತಿ ಹತ್ತಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸುಸಂಸ್ಕೃತ ಸಭ್ಯ ರಾಷ್ಟ್ರವಾಗಿದ್ದ ಭಾರತವನ್ನ ಪರಕೀಯರ ಆಕ್ರಮಣದಿಂದ ನಮ್ಮ ಸಂಪತ್ತು ಮತ್ತು ಸಭ್ಯತೆಗಳನ್ನು ಕಳೆದುಕೊಂಡಿದ್ದೇವು. ಸಾತಂತ್ರ್ಯದ ನಂತವರೂ ನಮಗೆ ಭೋಧನೆ ಮಾಡಿದ್ದು ಭಾರತದ ಸೋಲಿನ ಇತಿಹಾಸವನ್ನು. ಆದ್ರೆ ಈಗ ಭಾರತ ಬದಲಾಗಿದೆ. ಶಿಕ್ಷಣದ ಮೂಲಕ ಭಾರತವನ್ನ ಮತ್ತೆ ಕಟ್ಟಬೇಕು ಅನ್ನುವಂತಹ ಸಂಕಲ್ಪದೊಂದಿಗೆ ನಾವು ಜಗತ್ತಿನ ಸವಾಲನ್ನ ಎದುರಿಸುವುದಕ್ಕೆ ತಯಾರಾಗಿದ್ದೇವೆ ಎಂದರು.
ಈ ನಿಟ್ಟಿನಲ್ಲಿ ಬಿಎಸ್ ಆರ್ ಎನ್ ಎಸ್ ವಿದ್ಯಾನಿಕೇತನ ಸಂಸ್ಥೆ ಕೇವಲ ಶಿಕ್ಷಣ ಮಾತ್ರ ಕೊಡೋದಲ್ಲ. ಶೀಲವಂತ ಮತ್ತು ಚಾರಿತ್ರ್ಯವಂತ ಸಮಾಜವನ್ನ ನಿರ್ಮಾಣ ಮಾಡುವುದಕ್ಕೆ ಬೇಕಾದಂತಹ ಶಿಕ್ಷಣವನ್ನ ನೀಡಬೇಕು. ಯಾಕೆ ಅಂದ್ರೆ ಭಾರತೀಯರು ಗೌರವಿಸಿದ್ದು ಪೂಜಿಸಿದ್ದು ಸಂಪತ್ತನ್ನಲ್ಲ, ಚಾರಿತ್ರ್ಯವಂತರನ್ನ, ಶೀಲವನ್ನ ತ್ಯಾಗವನ್ನ ಸೇವೆಯನ್ನ. ಈ ರೀತಿಯ ಮನೋಭಾವೆನೆಯನ್ನ ಬೆಳೆಸುವಂತಹ ಶಿಕ್ಷಣವನ್ನ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಲೋಕಾಯುಕ್ತ ಜಸ್ಟೀಸ್ ಪಿ. ವಿಶ್ವನಾಥ ಶೆಟ್ಟಿ, ಬಿ.ಎಸ್.ಆರ್.ಎನ್.ಎಸ್ ವಿದ್ಯಾನಿಕೇತನದ ಆಡಳಿತ ಮಂಡಳಿ ಚೇರ್ ಮೆನ್ ಕೆ. ಪ್ರಕಾಶ್ ಶೆಟ್ಟಿ, ಗೌರವ ಆತಿಥಿಗಳಾಗಿ ಬೆಂಗಳೂರು ವಿವಿ ಉಪಕುಲಪತಿ ಡಾ. ಜಯಕರ ಶೆಟ್ಟಿ ಎಂ, ಉದ್ಯಮಿ ಶಶಿಕಿರಣ್ ಶೆಟ್ಟಿ, ಹಾಗೂ ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರು ಉಪಸ್ಥಿತರಿದ್ದರು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಕಾರ್ಯದರ್ಶಿ ಮಧುಕರ ಶೆಟ್ಟಿ, ಕೋಶಾಧಿಕಾರಿ ದೀಪಕ್ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here