ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಗೆ ಅಕ್ಕಿ-ಗೋಧಿ; ತೊಗರಿಬೇಳೆ, ಎಣ್ಣಿ, ಉಪ್ಪಿಲ್ಲದೆ ಊಟಕ್ಕೆಲ್ಲಿ ರುಚಿ?

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

Advertisement

ಕೋವಿಡ್-19 ಕಾರಣದಿಂದ ಹಲವು ತಿಂಗಳುಗಳ ಬಳಿಕ ಶಾಲೆಗಳು ಈಗ ಪ್ರಾರಂಭಗೊಂಡಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರ ಯೋಜನೆಯೂ ಚಾಲ್ತಿಯಲ್ಲಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಇಲ್ಲಿಯವರೆಗೂ ಪೂರೈಕೆಯಾಗಿಲ್ಲ.

ಬಿಸಿಯೂಟ ಯೋಜನೆಗೆ ಕೇವಲ ಅಕ್ಕಿ-ಗೋಧಿ ನೀಡಿದರೆ ಸಾಕೆ? ಮುಖ್ಯವಾಗಿ ತೊಗರಿ ಬೆಳೆ, ಎಣ್ಣೆ, ಉಪ್ಪು ಸೇರಿದಂತೆ ಇತರೆ ಪದಾರ್ಥಗಳ ಸರಬರಾಜು ಯಾವಾಗ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ.

29,207 ವಿದ್ಯಾರ್ಥಿಗಳು

6-10ನೇ ತರಗತಿಗೆ ಅಕ್ಟೋಬರ್ 21ರಂದು ಹಾಗೂ 1-5ನೇ ತರಗತಿಗಳಿಗೆ ನವೆಂಬರ್ 2ನೇ ತಾರೀಖಿನಿಂದ ಶಾಲೆಗಳಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆ ಪ್ರಾರಂಭವಾಗಿದ್ದು, ಎರಡೂ ತಾಲೂಕುಗಳಲ್ಲಿ ಬರುವ 167 ಬಿಸಿಯೂಟ ಕೇಂದ್ರಗಳಲ್ಲಿ ಒಟ್ಟು 29,207 ವಿದ್ಯಾರ್ಥಿಗಳ ದಾಖಲಾತಿ ಇದೆ.

ಪೂರ್ಣ ಪ್ರಮಾಣದಲ್ಲಿ ಆಹಾರ ಪೂರೈಕೆಯಾಗದೇ ಇರುವುದರಿಂದ ಸರ್ಕಾರ ಪರಿವರ್ತನಾ ವೆಚ್ಚವೆಂದು 6-10ನೇ ತರಗತಿಯ ವಿದ್ಯಾರ್ಥಿಗಳಿಗೆ 7.45 ರೂ. ಹಾಗೂ 1-5ನೇ ತರಗತಿಯ ವಿದ್ಯಾರ್ಥಿಗಳಿಗೆ 4.97 ರೂ.ಗಳನ್ನು ಖರ್ಚು ಮಾಡಲು ಅವಕಾಶವನ್ನು ಕಲ್ಪಿಸಿದೆ. ಆದರೆ ಈ ಅನುದಾನ ಶಾಲೆಗಳಲ್ಲಿ ಇದನ್ನು ಎಷ್ಟರ ಮಟ್ಟಿಗೆ ಸದ್ಬಳಕೆಯಾಗುತ್ತಿದೆ ಎಂಬುದನ್ನು ಇಲಾಖೆಯ ಅಧಿಕಾರಿಗಳು ಪರಿಶೀಲಿಸುವುದು ಅವಶ್ಯವಿದೆ.

ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ?:

ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಜಾರಿಯಾದಂತಹ ಮಧ್ಯಾಹ್ನದ ಬಿಸಿಯೂಟ ಯೋಜನೆ ಪೂರ್ಣ ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಸರಬರಾಜು ಆಗದೇ ಇರುವುದರಿಂದ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ, ಶಾಲಾ ಸಂಚಿತ ನಿಧಿಯಿಂದ ಹಣ ಉಪಯೋಗಿಸಿಕೊಂಡು ವಸ್ತುಗಳ ಖರೀದಿಗೆ ಸರ್ಕಾರ ಆದೇಶ ನೀಡಿದೆ.

ಆದರೆ ಮಾರುಕಟ್ಟೆಗಳಲ್ಲಿ ದಿನಸಿ ವಸ್ತುಗಳು ದುಬಾರಿಯಾಗಿರುವುದರಿಂದ ಈ ಅನುದಾನ ಸಾಕಾಗುತ್ತಿಲ್ಲ ಎಂದು ಶಾಲಾ ಮುಖ್ಯೋಪಾಧ್ಯಾಯರು ಹೇಳುತ್ತಿದ್ದು, ಕೆಲವು ಶಾಲೆಗಳಲ್ಲಿ ಹಳೆಯ ದಾಸ್ತಾನಿನಲ್ಲಿದ್ದ ಪದಾರ್ಥಗಳನ್ನೇ ಬಳಸಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುತ್ತಿದ್ದಾರೆ. ಇನ್ನೂ ಕೆಲವು ಶಾಲೆಗಳಲ್ಲಿ ಮಾರುಕಟ್ಟೆಯಿಂದ ತಂದು ಗುಣಮಟ್ಟದ ಆಹಾರ ಪೂರೈಕೆ ಮಾಡಲು ಮೀನ-ಮೇಷ ನಡೆಸುತ್ತಿರುವುದು ಕಂಡು ಬರುತ್ತಿದೆ.

ಅಧಿಕಾರಿಗಳ ಭೇಟಿಯೇ ಇಲ್ಲ?:

ಬಿಸಿಯೂಟ ಯೋಜನೆಗೆ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಸರಬರಾಜು ಮಾಡದೇ ಇರುವುದರಿಂದ ಪರಿವರ್ತನಾ ವೆಚ್ಚ ವಿನಿಯೋಗಿಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರವನ್ನು ಪೂರೈಸಲು ಸರಕಾರ ನಿರ್ದೆಶನ ನೀಡಿದೆ. ಈ ಕೆಲಸ ಶಾಲೆಗಳಲ್ಲಿ ಹೇಗೆ ನಿಭಾಯಿಸಲಾಗುತ್ತಿದೆ? ಮಕ್ಕಳಿಗೆ ಸಮರ್ಪಕವಾಗಿ ಬಿಸಿಯೂಟ ಸಿಗುತ್ತಿದೆಯೇ? ಎಂಬುದನ್ನು ಪರಿಶೀಲಿಸಬೇಕಾದ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡದೇ ಇರುವುದರಿಂದ ಶಾಲೆಗಳಲ್ಲಿ ವಿತರಣೆ ಮಾಡುವಂತಹ ಊಟವನ್ನು ಸವಿದು ತರಗತಿಗಳಲ್ಲಿ ಹಾಜರಾಗುತ್ತಿದ್ದಾರೆ.

ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಆರ್.ಪಿ. ತಳಗೇರಿ ಅವರು ಪ್ರತಿಕ್ರಿಯಿಸಿ, ರಾಜ್ಯ ಹಂತದಲ್ಲಿಯೇ ತೊಗರಿಬೇಳೆ, ಎಣ್ಣೆ, ಉಪ್ಪು ಸರಬರಾಜಾಗಿಲ್ಲ. ಸರಕಾರದ ನಿರ್ದೆಶನದಂತೆ ಎಲ್ಲ ಮುಖ್ಯೋಪಾಧ್ಯಾಯರಿಗೆ ಪರಿವರ್ತನಾ ವೆಚ್ಚದಿಂದ ಆಹಾರ ಧಾನ್ಯ ಮತ್ತು ತರಕಾರಿ ಖರೀದಿ ಮಾಡಲು ಸೂಚಿಸಿದೆ. ಎಲ್ಲ ಶಾಲೆಗಳಲ್ಲಿಯೂ ಮಧ್ಯಾಹ್ನದ ಉಪಾಹಾರ ಯೋಜನೆ ನಡೆಯುತ್ತಿದೆ. ಆಹಾರ ಧಾನ್ಯಗಳು ಬಂದ ತಕ್ಷಣ ಶಾಲೆಗಳಿಗೆ ಸರಬರಾಜು ಮಾಡಲಾಗುವುದು ಎಂದರು.

ಸೋಮವಾರ ಸಿಹಿಯೂಟ

ಮುಖ್ಯೋಪಾಧ್ಯಾಯ ಎಚ್.ಬಿ. ಸಣ್ಣಮನಿ ಅವರನ್ನು ಪ್ರಶ್ನಿಸಿದಾಗ, ಪೂರ್ಣ ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಸರಬರಾಜಾದರೆ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಸೋಮವಾರ ಮಕ್ಕಳಿಗೆ ಸಿಹಿಯೂಟ ನೀಡಿದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಆಹಾರ ಪೂರೈಸಬೇಕು ಎಂದರು.


Spread the love

LEAVE A REPLY

Please enter your comment!
Please enter your name here