-ತೊಲಗಲಿ ಕೊರೋನಾ, ಎಂದಿನಂತೆ ಶಾಲೆಗೆ ಮರಳೋಣ
-ಶಾಲಾರಂಭದ ಜೊತೆ ಹೊಸ ವರ್ಷಾಚರಣೆಯ ಸಿಹಿ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಕೊರೋನಾ ಮಹಾಮಾರಿ ಶಾಲಾ ಮಕ್ಕಳಿಗೆ ಶಾಲೆಯ ಮುಖ ನೋಡದಂತೆ ಮಾಡಿತ್ತು. ಇದೀಗ ವೈರಸ್‌ನ ಅಬ್ಬರ ಕಡಿಮೆಯಾಗಿದ್ದು ಮಕ್ಕಳು ಸಂತಸದಿಂದ ಶಾಲೆಗೆ ಮರಳಿದ್ದಾರೆ. ಆದರೂ ಕೊರೊನಾ ಗುಮ್ಮ ಇನ್ನೂ ಇರುವುದರಿಂದ ಎಲ್ಲ ಶಾಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ.
ಕಳೆದ ೧೦ ತಿಂಗಳಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಹೊಸ ವರ್ಷಕ್ಕೆ ಆರಂಭವಾದ ಹಿನ್ನೆಲೆಯಲ್ಲಿ ಒಂದಡೆ ಶಾಲೆಗಳಿಗೆ ತಳಿರು ತೋರಣಗಳಿಂದ ಶೃಂಗಾರ ಗೊಳಿಸುವ ಮೂಲಕ ಸಾಮಾಜಿಕ ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್ ಸೇರಿ ಕೋವಿಡ್ ನಿಯಮ ಪಾಲನೆ ಹೀಗೆ ಮಕ್ಕಳನ್ನು ಶಾಲೆಗೆ ಶುಕ್ರವಾರ ಭರ್ಜರಿ ಸ್ವಾಗತಿಸಲಾಯಿತು.
ನಗರದ ಹೊರ ವಲಯದಲ್ಲಿರುವ ಸರಸ್ವತಿ ವಿದ್ಯಾ ಮಂದಿರ ಶಾಲೆಯಲ್ಲಿ ಮಕ್ಕಳಿಗೆ ಮಾಸ್ಕ್ ಜಾಗೂ ಸಾನಿಟೈಜರ್ ಮತ್ತು ಸಿಹಿ ವಿತರಿಸುವ ಮೂಲಕ ಶಾಲೆಗಳನ್ನು ಆರಂಭಿಸಲಾಯಿತು. ಅದರಂತೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮನಸ್ಸಿಗೆ ಮುದ ನೀಡಲು ಶಾಲೆಯನ್ನು ಮಾವಿನ ತೋಪು ಹಾಗೂ ಹೂಮಾಲೆ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಅಲ್ಲದೇ, ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಂತರ ಚಾಕಲೇಟ್ ನೀಡಿ ತರಗತಿಗೆ ಆಹ್ವಾನ ನೀಡಿದ ದೃಶ್ಯಗಳು ಕಂಡ ಬಂದವು.
ಅದಲ್ಲದೆ ಶಾಲೆಗೆ ಬರುವ ಮಕ್ಕಳಿಗೆ ಮಾಸ್ಕ್ ಮತ್ತು ಸಾನಿಟೈಜರ್ ಹಾಗೂ ಮಕ್ಕಳ ತಲೆಯ ಮೇಲೆ ಹೂ ಮಳೆ ಸುರಿಸುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಮಕ್ಕಳು ಸಹ ಸರತಿಯಲ್ಲಿ ನಿಂತು, ಕೋವಿಡ್ ತಪಾಸಣೆಗೆ ಒಳಗಾಗಿ ಸಹಕಾರ ನೀಡಿದರು.
ಮನೆಯಲ್ಲಿ ಕುಳಿತು ಬಹಳ ಬೇಸರವಾಗಿತ್ತು. ಶಾಲೆ ಶುರುವಾಗಿದ್ದೇ ತಡ, ಶಾಲೆಗೆ ಓಡೋಡಿ ಬಂದೇವು. ಶಾಲೆಯ ಶಿಕ್ಷಕರು, ಸ್ನೇಹಿತರನ್ನು ಕಳೆದ ಹತ್ತು ತಿಂಗಳಿನಿಂದ ನೋಡಿರಲಿಲ್ಲ. ಈಗ ಬಹಳ ಖುಷಿಯಾಗಿದೆ ಎಂದು ಶಾಲಾ ಮಕ್ಕಳು ಸಂತಸ ಹಂಚಿಕೊಂಡರು.
ಕಳೆದ ಹತ್ತು ತಿಂಗಳಿಂದ ಕೋವಿಡ್ ಹಿನ್ನಲೆ ಶಾಲಾ-ಕಾಲೇಜಿಗೆ ಸರ್ಕಾರ ರಜೆ ಘೋಷಿಸಿತು. ಇದೀಗ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಶಾಲೆ ಆರಂಭಿಸಿದೆ. ಸರ್ಕಾರದ ನಿರ್ದೇಶನ ಹಾಗೂ ಕೋವಿಡ್ ನಿಯಮ ಪಾಲನೆ ಮೂಲಕ ಶಾಲೆ ಪ್ರಾರಂಭ ಮಾಡಿದೆ ಎಂದು ಶಿಕ್ಷಕ ಬಿರಪ್ಪ ಹಾಗೂ ಆರ್
ಹೆಚ್ ಅತ್ತನೂರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.