
ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಕೊಪ್ಪಳದಲ್ಲಿ 100 ವರ್ಷಕ್ಕೂ ಹೆಚ್ಚಿನ ಇತಿಹಾಸ ಇರುವ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ (MHPS) ಶಾಲೆಯ ಕಟ್ಟಡ ಉಳಿಸುವಂತೆ ಶಾಲೆಯ ಹಳೇ ವಿದ್ಯಾರ್ಥಿಗಳ ಬಳಗ ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಈ ಶಾಲಾ ಕಟ್ಟಡ ಪಾರಂಪರಿಕ ಕಟ್ಟಡವಾಗಿದ್ದು ಹೈದ್ರಾಬಾದ್ ನಿಜಾಮ್ ಆಳ್ವಿಕೆಯ ಕಾಲದಲ್ಲಿ ಉಪವಿಭಾಗಿಧಿಕಾರಿಗಳ ಬಂಗಲೆಯಾಗಿತ್ತು. ಈ ಕಟ್ಟಡ ನೆಲಸಮಗೊಳಿಸಿ ಅಲ್ಲಿ ಗುರುಭವನ ಕಟ್ಟಲು ಉದ್ದೇಶಿಸಿರುವ ನಿರ್ಧಾರ ಕೂಡಲೇ ಕೈ ಬಿಡಬೇಕು. ಕಟ್ಟಡವನ್ನು ಸಂರಕ್ಷಿಸಿ ಶೈಕ್ಷಣಿಕ ಚಟುವಟಿಕೆಗೆ ಕಟ್ಟಡ ಬಳಕೆಯಾಗಲಿ ಎಂದು ಆಗ್ರಹಿಸಿದರು.
100 ವರ್ಷಕ್ಕಿಂತ ಹೆಚ್ಚು ಹಳೆಯದಾದ ಕಟ್ಟಡ ಉಳಿಸಲು ಕಾನೂನಿನಲ್ಲಿ ಅವಕಾಶ ಇದೆ. ಹೈ.ಕ.ವಿಮೋಚನೆಗೆ ಮೊದಲ ಹೆಜ್ಜೆಯಾಗಿ ಅಂದಿನ ಭಾರತ ಸರಕಾರ ಇದೇ ಬಂಗಲೆಯನ್ನು ವಶಪಡಿಸಿಕೊಂಡಿತ್ತು. ಹಳೆಯ ಕಟ್ಟಡಗಳನ್ನು ಐತಿಹಾಸಿಕ ಕಮಾನುಗಳನ್ನು ಉಳಿಸಿಕೊಳ್ಳಬೇಕು. ಈ ಕಟ್ಟಲು ಉದ್ದೇಶಿಸಿರುವ ಗುರುಭವನ ಬೇರೆ ಕಡೆ ನಿರ್ಮಿಸಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ಒತ್ತಾಯಿಸಿದರು.
ಕಟ್ಟಡವನ್ನು ನೆಲಸಮಗೊಳಿಸುವ ಬದಲು, ಅದನ್ನು ಸಂರಕ್ಷಿಸಿ ಅಲ್ಲಿ ಹೈದ್ರಾಬಾದ್ ವಿಮೋಚನೆಯ ಹೋರಾಟದ ಮ್ಯೂಸಿಯಂ, ಗ್ರಂಥಾಲಯ, ಆವರಣದಲ್ಲಿ ಸುಂದರ ಉದ್ಯಾನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಅಮರೇಶ ಮುರಳಿ, ಬಸವರಾಜ ಕರುಗಲ್, ಡಿ.ಗುರುರಾಜ, ನಾಗರಾಜ ನಾಯಕ ಡೊಳ್ಳಿನ್, ಗಿರೀಶ್ ಪಾನಘಂಟಿ, ಮುನೀರ್ ಸಿದ್ದಕಿ, ರಫೀಕ್, ಮಂಜುನಾಥ ಸೊಂಡಲಿ, ಕಾಶೀನಾಥ ಹಂಚಿನಾಳ, ಸಚ್ಚಿದಾನಂದ, ಶ್ರೀಕಾಂತ್ ಭದ್ರಾಪುರ, ಹುಸೇನ್ ಪಾಷಾ, ಜಯರಾಮರಡ್ಡಿ ತೋಟದ ಮತ್ತಿತರರು ಇದ್ದರು.