ವಿಜಯಸಾಕ್ಷಿ ಸುದ್ದಿ, ಗದಗ : ಕಳೆದ ಒಂದೂವರೆ ತಿಂಗಳಿಂದ ಬಿಕೋ ಎನ್ನುತ್ತಿದ್ದ ಶಾಲಾ ಆವರಣಗಳಿಗೆ ಮತ್ತೆ ಜೀವಕಳೆ ಬಂದಿದೆ. ಶೈಕ್ಷಣಿಕ ವರ್ಷಾರಂಭದ ಹಿನ್ನೆಲೆಯಲ್ಲಿ ಶಾಲೆಗಳು ಸುಣ್ಣ-ಬಣ್ಣ ಬಳಿದುಕೊಂಡು ಚಿಣ್ಣರನ್ನು ಸ್ವಾಗತಿಸಲು ಸಜ್ಜಾಗಿವೆ. ರಜೆಯ ಗುಂಗಿನಲ್ಲಿದ್ದ ವಿದ್ಯಾರ್ಥಿ ಸಮೂಹ ಹೊಸ ತರಗತಿಗೆ ಹೋಗುವ ಸಂಭ್ರಮದಲ್ಲಿದ್ದರೆ, ಪಾಲಕರು ಅವರಿಗೆ ಅಗತ್ಯವಾದ ಶೈಕ್ಷಣಿಕ ಸಾಮಗ್ರಿ ಖರೀದಿಯಲ್ಲಿ ಮಗ್ನರಾಗಿದ್ದಾರೆ.
ಬೇಸಿಗೆ ರಜೆಯ ಮಜಾ ಸವಿಯಲು ಸಂಬಂಧಿಕರು, ಬಂಧುಗಳ ಊರುಗಳಿಗೆ ತೆರಳಿದ್ದ ವಿದ್ಯಾರ್ಥಿಗಳು ಇದೀಗ ಪುನಃ ತಮ್ಮ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ಶಾಲೆ ಆರಂಭವಾಗುವ ಮುನ್ನವೇ ಮಕ್ಕಳ ಓದಿಗೆ ಬೇಕಿರುವ ಪಠ್ಯ-ಪುಸ್ತಕ, ನೋಟ್‌ಬುಕ್, ಸಮವಸ್ತçಗಳನ್ನು ಹೊಂದಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪಾಲಕರು ತೊಡಗಿದ್ದಾರೆ.

ಮುದ್ರಣ ಕಾಶಿ ಎಂದೇ ಕರೆಯಲಾಗುವ ಗದುಗಿನ ಪುಸ್ತಕ ಅಂಗಡಿಕಾರರು ಅಗತ್ಯ ಸಾಮಗ್ರಿಯನ್ನು ಈಗಾಗಲೇ ದಾಸ್ತಾನು ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಬೇಕಾದ ನೋಟ್ ಬುಕ್, ಪೆನ್, ಸ್ಕೂಲ್ ಬ್ಯಾಗ್, ಕಂಪಾಸ್, ಪುಸ್ತಕದ ರಕ್ಷಾ ಕವಚ ಒಳಗೊಂಡಂತೆ ಎಲ್ಲ ಬಗೆಯ ವಸ್ತುಗಳ ಹೊಸ ದಾಸ್ತಾನು ಸಂಗ್ರಹಿಸಿಕೊಂಡಿದ್ದಾರೆ. ಕಳೆದೊಂದು ವಾರದಿಂದ ಪಾಲಕರು ಮಕ್ಕಳಿಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದರೆ, ಅತ್ತ ಬಟ್ಟೆ ಅಂಗಡಿಕಾರರು ಕೂಡ ವಿವಿಧ ಶಾಲೆಗಳ ಸಮವಸ್ತçಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಬಿಸಿಲು ಕಳೆದು ಸಂಜೆಯಾಗುತ್ತಿದ್ದಂತೆಯೇ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಪಾಲಕರು ಹಾಗೂ ಮಕ್ಕಳ ದಂಡು ನೆರೆಯುತ್ತಿದೆ. ಎತ್ತ ಕಣ್ಣು ಹಾಯಿಸಿದರೂ ಪುಸ್ತಕ, ಸಮವಸ್ತç, ಶೂ ಖರೀದಿಸುವ ನೋಟವೇ ಕಂಡುಬರುತ್ತಿದೆ.
ಶಾಲೆಗೆ ರಜೆ ಇದ್ದ ಕಾರಣ ಶಾಲಾ ವಾಹನಗಳ ಚಾಲಕರು ಕೂಡ ತುಸು ನಿರಾಳರಾಗಿದ್ದರು. ಇದೀಗ ಅವರೂ ಕೂಡ ಶೈಕ್ಷಣಿಕ ವರ್ಷಾರಂಭದ ಉತ್ಸಾಹದಲ್ಲಿದ್ದಾರೆ. ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಆಟೋ ಸೇರಿದಂತೆ ತಮ್ಮ ವಾಹನಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಹೊಸ ವಿದ್ಯಾರ್ಥಿಗಳ ಪಾಲಕರ ವಿಶ್ವಾಸ ಗಳಿಸಿಕೊಳ್ಳಲು ಮುಂದಾಗುತ್ತಿದ್ದರೆ, ಕೆಲ ಖಾಸಗಿ ಶಾಲೆಗಳು ತಮ್ಮ ಶಾಲಾ ವಾಹನಗಳ ದರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಲೋಚಿಸುತ್ತಿವೆ. ಇದರಿಂದ ಪಾಲಕರು ಖಾಸಗಿ ವಾಹನಗಳನ್ನೇ ಅವಲಂಬಿಸಲು ಚಿಂತನೆ ನಡೆಸಿದ್ದಾರೆ.

ಅವಳಿ ನಗರ ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಶಾಲೆಗಳಲ್ಲಿ ಶಿಕ್ಷಕರು, ಎಸ್‌ಡಿಎಂಸಿ, ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘಟನೆಗಳ ಸಹಕಾರದಿಂದ ಶಾಲಾ ಕೊಠಡಿ ಹಾಗೂ ಆವರಣವನ್ನು ಸ್ವಚ್ಛಗೊಳಿಸಿ, ಅಡುಗೆ ಕೋಣೆಗಳಿಗೆ ಸುಣ್ಣಬಣ್ಣ ಬಳಿದು ಶೃಂಗರಿಸುವ ಕಾಯಕದಲ್ಲಿ ತೊಡಗಿದ್ದರು. ಮೇ.೨೯ರಂದು ಶಾಲಾ ಆರಂಭೋತ್ಸವಕ್ಕೆ ವಿದ್ಯಾರ್ಥಿಗಳನ್ನು ವಿನೂತನ ರೀತಿಯಲ್ಲಿ ಬರಮಾಡಿಕೊಳ್ಳಲು ಶಿಕ್ಷಕರು ಅಗತ್ಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು.
ಜಿಲ್ಲೆಯ ವಿವಿಧ ಶಾಲಾ ಆವರಣದಲ್ಲಿ ಬುಧವಾರದಿಂದ ಮಕ್ಕಳ ಕಲರವ ಪುನಃ ಕೇಳಿಬರಲಿದೆ. ರಜಾ ದಿನಗಳ ಸವಿಯುಂಡ ಮಕ್ಕಳು ಹೊಸ ಹುಮ್ಮಸ್ಸಿನೊಂದಿಗೆ ಶಾಲಾ ಆವರಣದ ಕಡೆ ಹಜ್ಜೆ ಹಾಕುತ್ತಾರೆ. ಇದರೊಂದಿಗೆ ತಮ್ಮ ಗೆಳೆಯರ ಜೊತೆಗೆ ಮಾತು-ಕಥೆ, ಹರಟೆ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಮೊಬೈಲ್‌ನೊಂದಿಗೇ ಗೆಳೆತನ ಮಾಡಿಕೊಂಡು ಸಮಯ ಕಳೆಯುತ್ತ, ಪಾಲಕರನ್ನೂ ಗೋಳು ಹುಯ್ದುಕೊಳ್ಳುತ್ತ ಕಾಲ ಕಳೆದ ಮಕ್ಕಳನ್ನು ಯಾವಾಗ ಶಾಲೆಗೆ ಕಳುಹಿಸುತ್ತೇವೆ ಎಂದು ಕೊರಗುತ್ತಿದ್ದ ಪಾಲಕರಿಗೆ ಶಾಲಾ ಆರಂಭೋತ್ಸವ ನೆಮ್ಮದಿ ತಂದುಕೊಟ್ಟಿದೆ. ಆರಂಭದಿಂದಲೇ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರ ಕನಸುಗಳನ್ನು ಸಾಕಾರಗೊಳಿಸಬೇಕೆಂಬ ಇಚ್ಛೆ ಹೊಂದಿರುವ ಶಿಕ್ಷಕರು ಶಾಲಾ ಆರಂಭದ ಕ್ಷಣಗಳಿಗೆ ಕಾತರದಿಂದ ಕಾಯುತ್ತಿದ್ದಾರೆ.
Advertisement