ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನಕ್ಕೆ ಕಾರಣರಾಗಿರುವ ಶಾಸಕ ಅರವಿಂದ್ ಬೆಲ್ಲದ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಮಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಾಕಷ್ಟು ವಿದ್ಯಮಾನಗಳು ನಡೆಯುತ್ತಿವೆ. ಇದರ ಮಧ್ಯೆ ನನಗೆ ಸಾಕಷ್ಟು ಕರೆಗಳು ಬರುತ್ತಿವೆ. ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ, ನಾನು ಸ್ವಾಮಿ ಅಂತಾ ಹೇಳಿದರು. ಯಾವ ಸ್ವಾಮೀಜಿ ಅಂದರೆ ಯುವ ರಾಜಸ್ವಾಮೀಜಿ ಅಂದರು. ಬೇರೆ ನಂಬರ್ ನಿಂದ ಮತ್ತೆ ಕಾಲ್ ಮಾಡಿದ್ದರು ಎಂದು ಹೇಳಿದ್ದಾರೆ.
ನಾನು ಯುವರಾಜ ಸ್ವಾಮಿ ನನ್ನನ್ನು ಅನಗತ್ಯವಾಗಿ ಜೈಲಿಗೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಈ ಕಾಲ್ ಹಿಂದೆ ಸಾಕಷ್ಟು ಷಡ್ಯಂತ್ರ ಅಡಗಿವೆ ಎಂದು ಗುಡುಗಿದ್ದಾರೆ.
ನಮ್ಮ ತಂದೆ ಚಂದ್ರಕಾಂತ್ ಬೆಲ್ಲದ್ 5 ಬಾರಿ ಶಾಸಕರಾಗಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೆ ಪ್ರಾಮಾಣಿಕ ಕಾರ್ಯವನ್ನು ಅವರು ಮಾಡಿದ್ದಾರೆ. ನಾನು ಕೂಡ ತಂದೆಯ ಮಾರ್ಗದಲ್ಲಿಯೇ ನಡೆಯುತ್ತಿದ್ದೇನೆ. ನನ್ನ ಫೋನ್ ಕೂಡ ಟ್ಯಾಪ್ ಆಗಿದೆ. ಈ ಕುರಿತು ಸ್ಪೀಕರ್ ಹಾಗೂ ಗೃಹ ಸಚಿವರಿಗೆ, ಡಿಜಿಗೆ ಪತ್ರ ನೀಡಿದ್ದೇನೆ ಎಂದು ಹೇಳಿದ್ದಾರೆ.
ಜೈಲಿನಲ್ಲಿದ್ದ ಮನುಷ್ಯನಿಗೆ ಯಾರು ಫೋನ್ ನೀಡಿದ್ದಾರೆ? ಅದರ ಕುರಿತು ತನಿಖೆಯಾಗಬೇಕು. ನಾನು ಹೋದ ಪ್ರದೇಶದಲ್ಲಿ ಒಂದಿಷ್ಟು ಹೊಸ ಜನ ಬರುತ್ತಾರೆ. ನಾನು ಎಲ್ಲಿ ಹೋಗುತ್ತೇನೆ? ಏನು ಮಾಡುತ್ತೇನೆ ಎಂದು ವಾಚ್ ಮಾಡುತ್ತಿದ್ದಾರೆ. ಹೀಗಾಗಿಯೇ ನನ್ನ ಫೋನ್ ಕೂಡ ಟ್ಯಾಪ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ನನ್ನ ಪೋನ್ ಟ್ಯಾಪ್ ಆಗುತ್ತಿದೆ. ಈ ಸಂಗತಿ ತನಿಖೆಯಿಂದಲೇ ತಿಳಿಯಬೇಕು ಎಂದು ಹೇಳಿದ್ದಾರೆ.