ವಿಜಯಸಾಕ್ಷಿ ಸುದ್ದಿ ಗದಗ
ಕೆರೆಯಲ್ಲಿ ಸ್ವಚ್ಛಂದವಾಗಿ ಈಜುವ ಪಕ್ಷಿಗಳ ಬೇಟೆ, ಅಕ್ರಮ ಮರಳು ಸಾಗಾಟ ತಡೆಗಟ್ಟುವ ಹಾಗೂ ಶೆಟ್ಟಿಕೆರೆಗೆ ಕಾಯಕಲ್ಪ ನೀಡಲು ಅರಣ್ಯ ಇಲಾಖೆ ಮಹತ್ವದ ಹೆಜ್ಜೆ ಇರಿಸಿದ್ದು, ಬಿದಿರು ಬೆಳೆಯುವ ಮೂಲಕ ಕೆರೆ ಸಂರಕ್ಷಣೆಗೆ ಇಲಾಖೆ ಮುಂದಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆಯನ್ನು ವಿದೇಶಿ ಪಕ್ಷಿಗಳ ವಿಹಾರಕ್ಕೆ ಅನುಕೂಲ ಆಗುವಂತೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಿದಿರು ನೆಡಲು ಆರಂಭಿಸಿದ್ದಾರೆ. ಸುಮಾರು ೨೩೪ ಎಕರೆ ವಿಶಾಲವಾದ ಶೆಟ್ಟಿಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ೨೦ ಸಾವಿರಕ್ಕೂ ಅಧಿಕ ಬಿದಿರು ಸಸಿ ಬೆಳೆಸುವ ಕಾರ್ಯ ನಡೆಯುತ್ತಿದೆ. ಕಪ್ಪತಗುಡ್ಡದ ನಡುವಿನ ಶೆಟ್ಟಿ ಕೆರೆ ಒತ್ತುವರಿಯಾದ ಜಾಗದಲ್ಲಿಯೂ ಬಿದಿರು ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ.
ಪ್ರತಿವರ್ಷವೂ ಚಳಿಗಾಲದ ವೇಳೆ ಮಂಗೋಲಿಯ, ಸೈಬಿರಿಯ ಸಹಿತ ಹತ್ತಾರು ದೇಶಗಳಿಂದ ಬಾನಾಡಿಗಳು ಆಗಮಿಸುತ್ತವೆ. ಪಟ್ಟೆ ತಲೆ ಹೆಬ್ಬಾತು (ಬಾರ್ ಹೆಡೆಡ್ ಗೀಸ್) ಪಕ್ಷಿಗಳು ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ವಲಸೆ ಬರುತ್ತವೆ. ಆದರೆ ಮಾಗಡಿ ಕೆರೆ ಸುತ್ತಮುತ್ತ ಕಲ್ಲು ಗಣಿಗಾರಿಕೆಯ ಕರ್ಕಶ ಶಬ್ದದಿಂದಾಗಿ ಪಕ್ಷಿಗಳು ವಿಮುಖವಾಗುತ್ತಿವೆ. ಅಲ್ಲಿಂದ ನೇರವಾಗಿ ಶೆಟ್ಟಿ ಕೆರೆಯತ್ತ ಮುಖ ಮಾಡುತ್ತಿರುವುದು ಹೊಸ ಪ್ರವಾಸಿತಾಣವಾಗಲು ಸಾಧ್ಯವಾಗಿದೆ.
ಶೆಟ್ಟಿಕೆರೆ ವಿದೇಶಿ ಬಾನಾಡಿಗಳನ್ನೇನೋ ಆಕರ್ಷಿಸುತ್ತಿದೆ. ಆದರೆ ಇಲ್ಲಿ ಪಕ್ಷಿಗಳ ಬೇಟೆಗೆ ದುಷ್ಕರ್ಮಿಗಳು ಹೊಂಚು ಹಾಕು ಕುಳಿತಿರುತ್ತಾರೆ. ಪಕ್ಷಿಬೇಟೆ ನಿಯಂತ್ರಣ, ಪಕ್ಷಿಗಳ ವಿಹಾರಕ್ಕೆ ಪೂರಕ ವಾತಾವರಣ ನಿರ್ಮಿಸುವ ಅಗತ್ಯವಿದೆ. ಜೊತೆಗೆ ಅರಣ್ಯ ಮತ್ತು ಕೆರೆ ಒತ್ತುವರಿ ತಡೆಯಲು ಬಿದಿರು ಸಸಿಗಳನ್ನು ನೆಡುವಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಗದಗ ಜಿಲ್ಲೆ ಬರಗಾಲದಿಂದ ಕೂಡಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ನಿರಂತರ ವರ್ಷಧಾರೆ ಸುರಿದಿದೆ. ಬಯಲುಸೀಮೆ ಮಲೆನಾಡಾಗಿ ಪರಿವರ್ತನೆಗೊಳ್ಳುತ್ತಿದೆ. ಬರಡು ಭೂಮಿಯಲ್ಲೂ ನೀರು ಜಿನುಗುತ್ತಿದ್ದು, ಕೆರೆಕಟ್ಟೆಗಳು ತುಂಬಿಹರಿಯುತ್ತಿವೆ. ಸದ್ಯ ಶೆಟ್ಟಿಕೆರೆ ಅದ್ಭುತ ಪ್ರವಾಸಿತಾಣವಾಗಿದೆ. ಶೆಟ್ಟಿಕೆರೆ ಸಮೀಪದ ಕುಂದ್ರಳ್ಳಿ, ಚನ್ನಪಟ್ಟಣ ಗ್ರಾಮಗಳ ಜಮೀನು ನೀರಾವರಿಗೆ ಒಳಪಟ್ಟಿವೆ. ಅಲ್ಲದೇ ಶೆಟ್ಟಿಕೆರೆ ಕಪ್ಪತಗುಡ್ಡ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಬರುತ್ತದೆ.
ಮಾಗಡಿ ಕೆರೆ ರೀತಿಯಲ್ಲಿಯೆ ಶೆಟ್ಟಿ ಕೆರೆ ಅಭಿವೃದ್ಧಿಯಾಗಬೇಕು. ಪ್ರತಿ ವರ್ಷ ನವೆಂಬರ್ನಿಂದ ಮಾರ್ಚ್ವರೆಗೆ ವಿದೇಶಿ ಹಕ್ಕಿಗಳು ಮಾಗಡಿ ಕೆರೆ ಜೊತೆಗೆ ಶೆಟ್ಟಿ ಕೆರೆಗೂ ಆಗಮಿಸುತ್ತವೆ. ವಿದೇಶಿ ಹಕ್ಕಿಗಳನ್ನು ಕೆಲವರು ಬೇಟೆಯಾಡುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆಯೂ ಜಾಗೃತಿ ವಹಿಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಮಾಗಡಿ ಕೆರೆ ಮಾದರಿಯಲ್ಲೆ ಶೆಟ್ಟಿ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಬಿದಿರು ಬೆಳೆಸುವ ಮೂಲಕ ಕೆರೆ ಮತ್ತು ಅರಣ್ಯ ಭೂಮಿ ಒತ್ತುವರಿ ತಡೆಯುವ ಜೊತೆಗೆ ಪರಿಸರ ರಕ್ಷಣೆಗೂ ಕೆಲಸ ಮಾಡಲಾಗುತ್ತಿದೆ.
– ಎ.ವಿ. ಸೂರ್ಯಸೇನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಗದಗ